ದಾವಣಗೆರೆ: ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಕೊನೆಗೂ ಪ್ರಯಾಸದ ಗೆಲುವು ದಾಖಲಿಸಿದ್ದಾರೆ.
ಐದು ರಾಜ್ಯಗಳ ಚುನಾವಣೆ ಫಲಿತಾಂಶದೊಂದಿಗೆ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಆಡಳಿತರೂಢ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ.
ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ವಿರುದ್ಧ 4967 ಮತಗಳ ಅಂತರದಿಂದ ಗೆದ್ದಿದ್ದು, 20ನೇ ಸುತ್ತಿನ ಎಣಿಕೆ ಬಳಿಕ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.
ಮತದಾನ ಆರಂಭಗೊಂಡ ಮೊದಲ 6 ಸುತ್ತಿನಲ್ಲಿಯೂ ಸಮರ್ಥ್ ಶಾಮನೂರು ಹಿನ್ನಡೆ ಕಾಯ್ದುಕೊಂಡಿದ್ದು, 7ನೇ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮುನ್ನಡೆಯಲ್ಲಿದ್ದರು. ಆದರೆ 8 ಹಾಗೂ 9ನೇ ಸುತ್ತಿನಲ್ಲಿ ಅಂಕಿ-ಸಂಖ್ಯೆ ಉಲ್ಟಾ ಆಗಿದೆ. ಕೊನೆಗೆ ಈ ರಣಕಣದಲ್ಲಿ ಗೆಲುವು ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪಾಲಾಗಿದೆ.
ಬಾಗಲಕೋಟೆ : ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಸ್ಪಷ್ಟ ಮುನ್ನಡೆ ಕಾಯ್ದು 22,867 ಮತಗಳ ಅಂತರ ಗಳಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಬಿಜೆಪಿಯ ವೀರಣ್ಣ ಚರಂತಿಮಠ ಅವರಿಗೆ ಸೋಲಾಗಿದೆ.
ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಮೇಟಿ ಅವರ ಗೆಲುವು ಬಹುತೇಕ ಖಚಿತವಾಗಿರುವ ಸೂಚನೆಗಳು ದೊರೆಯುತ್ತಿದ್ದಂತೆಯೇ ಕಾರ್ಯಕರ್ತರು ಸಂಭ್ರಮಿಸಲು ಆರಂಭಿಸಿದ್ದವು. ಈಗ ಅವರ ಸಂಭ್ರಮ ಮುಗಿಲು ಮುಟ್ಟಿದೆ.
ಉಮೇಶ್ ಮೇಟಿ ಪಡೆದ ಮತಗಳು-97,941
ವೀರಣ್ಣ ಚರಂತಿಮಠ ಪಡೆದ ಮತಗಳು- 76,075
ಮತಗಳ ಅಂತರ- 22,867
ಮತ ಎಣಿಕೆಯ ಆರಂಭದಿಂದಲೇ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಸ್ಥಿರ ಮುನ್ನಡೆ ಸಾಧಿಸಿ ಪ್ರತಿಯೊಂದು ಸುತ್ತಿನಲ್ಲೂ ತಮ್ಮ ಮುನ್ನಡೆಯನ್ನು ವಿಸ್ತರಿಸಿಕೊಂಡರು. ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದು, ಉಮೇಶ್ ಮೇಟಿ ಗೆಲುವಿಗೆ ಘೋಷಣೆಗಳನ್ನು ಕೂಗಿ ಸಂಭ್ರಮಿಸುತ್ತಿದರು.
ಕೈಯಲ್ಲಿ ಪಕ್ಷದ ಬಾವುಟಗಳು ಹಾಗೂ ನಾಯಕರ ಫೋಟೋಗಳನ್ನು ಹಿಡಿದು ಉತ್ಸಾಹಭರಿತವಾಗಿ ಜಯಘೋಷ ಮಾಡುವ ದೃಶ್ಯಗಳು ಗಮನ ಸೆಳೆಯಿತು.
ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಎಚ್.ವೈ. ಮೇಟಿ ಅವರ ನಿಧನದಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಏಪ್ರಿಲ್ 9ರಂದು ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಮತ್ತು ಬಿಜೆಪಿಯ ವೀರಣ್ಣ ಚರಂತಿಮಠ ಸೇರಿದಂತೆ ಒಟ್ಟು 9 ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.

