ಶಿವಮೊಗ್ಗ | ಗ್ರಾಹಕನ ಖಾತೆಯಿಂದ ಕಡಿತಗೊಂಡ ಹಣ ಮರುಪಾವತಿ ತಡ ; ಯೂನಿಯನ್ ಬ್ಯಾಂಕಿಗೆ ದಂಡ

ಶಿವಮೊಗ್ಗ

ಶಿವಮೊಗ್ಗ, ಅನಧಿಕೃತ ವ್ಯವಹಾರದಿಂದ ಗ್ರಾಹಕರ ಖಾತೆಯಿಂದ ಕಡಿತಗೊಂಡ ಹಣವನ್ನು ಮರುಪಾವತಿಸಲು ತಡ ಮಾಡಿ ಸರಿಯಾದ ಕ್ರಮ ಕೈಗೊಳ್ಳದ ಶಿವಮೊಗ್ಗದ ಬ್ಯಾಂಕ್ ಒಂದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ಪರಿಹಾರ ನೀಡುವಂತೆ ಆದೇಶಿಸಿದೆ.

ಶಿವಮೊಗ್ಗದ ಶಾಂತಿನಗರದ ನಿವಾಸಿ ದೇವಪ್ರಸಾದ್ ಎಂಬುವವರು ಶಿವಮೊಗ್ಗದಲ್ಲಿರುವ ವಿನೋಬನಗರದ ಯೂನಿಯನ್ ಬ್ಯಾಂಕ್‌ನಲ್ಲಿ ಬಹಳ ವರ್ಷಗಳಿಂದ ಖಾತೆ ಹೊಂದಿದ್ದರು. ಒಂದು ದಿನ ದೇವ ಪ್ರಸಾದ್ ಅವರ ಮೊಬೈಲ್‌ಗೆ ಬ್ಯಾಂಕ್‌ನಿಂದ ಒಟ್ಟು ₹1,85,500 ಹಣ ಅನಧಿಕೃತವಾಗಿ ಕಡಿತವಾಗಿರುವ ಬಗ್ಗೆ ಸಂದೇಶ ಬಂದಿದೆ. ಈ ವಿಷಯವನ್ನು ತಕ್ಷಣವೇ ಬ್ಯಾಂಕಿನ ಗಮನಕ್ಕೆ ತಂದ ದೂರುದಾರರು, ಇದು ಮೋಸದ ವ್ಯವಹಾರ ಎಂದು ವರದಿ ಮಾಡಿ, ಈ ಹಣ ಪಾವತಿಯನ್ನು ತಡೆ ಹಿಡಿಯುವಂತೆ ಮನವಿ ಮಾಡಿಕೊಂಡಿದ್ದರು.

ಆದರೆ, ಬ್ಯಾಂಕ್‌ನ ಅಧಿಕಾರಿಗಳು ಈ ಕುರಿತು ಯಾವುದೇ ಸೂಕ್ತ ಕ್ರಮವನ್ನು ಕೈಗೊಳ್ಳಲಿಲ್ಲ. ಇದರಿಂದ ಬೇಸರಗೊಂಡ ದೇವಾ ಪ್ರಸಾದ್ ಅವರು, ಮೊದಲು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ನಂತರವೂ ಬ್ಯಾಂಕ್ ಸೂಕ್ತ ಕ್ರಮ ಕೈಗೊಳ್ಳದಿದ್ದಾಗ, ನೋಟಿಸ್ ನೀಡಿದರೂ ಯಾವುದೇ ಪ್ರತಿಕ್ರಿಯೆ/ಪ್ರತ್ಯುತ್ತರ ನೀಡದೇ, ಅನಧಿಕೃತವಾಗಿ ಕಡಿತಗೊಂಡ ಮೊತ್ತವನ್ನು ಖಾತೆಗೆ ಮರುಜಮೆ ಮಾಡದಿರುವುದು ಸ್ಪಷ್ಟವಾದ ಸೇವಾ ನ್ಯೂನತ’ ಎಂದು ಆಯೋಗವು ತೀರ್ಮಾನಿಸಿತು.

ದೂರನ್ನು ಪುರಸ್ಕರಿಸಿದ ಆಯೋಗವು, ಮೊದಲ ಮತ್ತು ಎರಡನೇ ಎದುರುದಾರ ಬ್ಯಾಂಕ್‌ಗಳು ದೂರುದಾರರಿಗೆ ಕಡಿತಗೊಂಡ ಸಂಪೂರ್ಣ ಮೊತ್ತ ₹1,85,500 ನ್ನು ಬಡ್ಡಿ ಸಹಿತವಾಗಿ ಪಾವತಿಸುವಂತೆ ಆದೇಶ ನೀಡಿದೆ.

ಅದರಂತೆ, ಈ ಮೊತ್ತಕ್ಕೆ ದಿನಾಂಕ 24/05/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9 ರ ಬಡ್ಡಿಯನ್ನು ಸೇರಿಸಿ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ. ಇದರ ಜೊತೆಗೆ, ದೂರುದಾರರಿಗೆ ಆದ ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ 10,000 ಗಳನ್ನು ಸಹ 45 ದಿನಗಳ ಒಳಗೆ ಪಾವತಿಸಲು ಆಯೋಗವು ಆದೇಶಿಸಿದೆ.

Author