ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಮೋದಿ ಸರ್ಕಾರ ಬದ್ಧ : ಸಂಸದ ರಾಘವೇಂದ್ರ ದೃಢ ಭರವಸೆ

ನವ ದೆಹಲಿ

ಅಡಿಕೆ ಹಾಳೆಗಳ ಮೇಲೆ ಅಮೇರಿಕ ನಿಷೇಧದ ವಿರುದ್ಧ ರಾಜತಾಂತ್ರಿಕವಾಗಿ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ಸಂಸದ ರಾಘವೇಂದ್ರ

ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಸಂಸದ ರಾಘವೇಂದ್ರ, ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಮೋದಿ ಸರ್ಕಾರ ಬದ್ಧವಾಗಿದೆ, ಸಮಗ್ರ ವರದಿ ಬಂದ ಕೂಡಲೇ ಸೂಕ್ತ ಕ್ರಮದ ಭರವಸೆ ನೀಡಿರುವ ಕೃಷಿ ಸಚಿವರು.

ವಿಶ್ವ ಆರೋಗ್ಯ ಸಂಸ್ಥೆ (WHO) ಅಡಿಕೆಗೆ ಅಂಟಿಸಿರುವ ‘ಕ್ಯಾನ್ಸರ್ ಕಾರಕ’ ಹಣೆಪಟ್ಟಿ ವೈಜ್ಞಾನಿಕವಾಗಿ ಸರಿಯಲ್ಲ, ಈ ಕುರಿತು ಭಾರತ ಸರ್ಕಾರ ಮಧ್ಯಪ್ರವೇಶಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ಅಡಿಕೆ ಬೆಳೆಗಾರರ ಪರ ಪ್ರಬಲವಾಗಿ ವಾದ ಮಂಡಿಸಬೇಕು ಎಂದು ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ಮಾಡಿ ಮನವಿ ಸಲ್ಲಿಸಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ದೇಶದ ಒಟ್ಟು ಅಡಿಕೆ ಉತ್ಪಾದನೆಯ ಸರಿಸುಮಾರು ಶೇ.65ರಷ್ಟನ್ನು ಒದಗಿಸುವ ಮಲೆನಾಡಿನ ಅಡಿಕೆ ಬೆಳೆಗಾರರು ತೀವ್ರ ಆತಂಕ ಮತ್ತು ಸಂಕಷ್ಟದಲ್ಲಿದ್ದು, ಅವರ ಪರವಾಗಿ ಸಂಸದ ರಾಘವೇಂದ್ರ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ಸುಮಾರು 1 ಲಕ್ಷ ಕೋಟಿ ರೂ. ಆರ್ಥಿಕತೆ ಹೊಂದಿರುವ ಮತ್ತು 11 ರಾಜ್ಯಗಳ 2 ಕೋಟಿಗೂ ಅಧಿಕ ಜನರ ಜೀವನಾಧಾರವಾಗಿರುವ ಅಡಿಕೆ ಬೆಳೆಯ ರಕ್ಷಣೆ ಇಂದು ಆದ್ಯತೆಯ ವಿಷಯವಾಗಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆ IARC (International Agency for Research on Cancer), ಅಡಿಕೆಯನ್ನು “Group-I Carcinogen” ಎಂದು ವರ್ಗೀಕರಿಸಿರುವುದು ವೈಜ್ಞಾನಿಕವಾಗಿ ದೋಷಪೂರ್ಣ ಮತ್ತು ಪಕ್ಷಪಾತತನದಿಂದ ಎಂದು ಸಂಸದರು ಹೇಳಿದ್ದಾರೆ.

ಭಾರತದ ICAR-CPCRI (Indian Council of Agricultural Research – Central Plantation Crops Research Institute) ನಡೆಸಿರುವ ಸಂಶೋಧನೆಗಳ ಪ್ರಕಾರ, IARC ಉಲ್ಲೇಖಿಸಿರುವ ಬಹಳಷ್ಟು ಅಧ್ಯಯನಗಳು, ತಂಬಾಕು ಮಿಶ್ರಿತ ಉತ್ಪನ್ನಗಳನ್ನು ಶುದ್ಧ ಅಡಿಕೆಯೊಂದಿಗೆ ತಾಳೆ ಮಾಡಿ ತಪ್ಪು ತೀರ್ಮಾನಕ್ಕೆ ಬಂದಿವೆ.

ಅಷ್ಟೇ ಅಲ್ಲ, ಅಡಿಕೆಯ ಮುಖ್ಯ ಘಟಕ “ಅರೆಕೋಲಿನ್” Group-2B ಯಲ್ಲಿದ್ದರೂ ಅಡಿಕೆಯನ್ನೇ Group-I ಎಂದು ವರ್ಗೀಕರಿಸಿರುವ ಆಂತರಿಕ ವಿರೋಧವೂ ಇದ್ದು, ಸಹಜವಾಗಿ ಪುನರ್ ಮೌಲ್ಯಮಾಪನ ಬೇಡುತ್ತದೆ. ಜನವರಿ 2026ರಲ್ಲಿ WHO/SEARO (South East Asia Regional Office) ವೆಬಿನಾರ್ ನಿರ್ಬಂಧಾತ್ಮಕ ನೀತಿಗಳ ಸಂಕೇತ ನೀಡಿರುವ ಹಿನ್ನೆಲೆಯಲ್ಲಿ ಭಾರತ ಕೂಡಲೇ ಮಧ್ಯ ಪ್ರವೇಶಿಸಿ, ಅಡಿಕೆ ಬೆಳೆಗಾರರ ಹಿತ ಕಾಯಬೇಕು ಎಂದು ಕೃಷಿ ಸಚಿವರನ್ನು ಒತ್ತಾಯಿಸಿದ್ದಾರೆ.

ಇದರ ಜೊತೆಗೆ, ಮೇ 2025ರಲ್ಲಿ ಅಮೇರಿಕಾ “ವಿಷಕಾರಿ ಕ್ಷಾರ ವಲಸೆ” (Toxic Alkaline Migration) ಎಂಬ ಕಾರಣ ನೀಡಿ ಅಡಿಕೆ ಹಾಳೆಯ ತಟ್ಟೆಗಳ ಮೇಲೆ ನಿಷೇಧ ಹೇರಿರುವುದು ನಮ್ಮ ಗ್ರಾಮೀಣ ಕೈಗಾರಿಕೆಗಳಿಗೆ ಗಂಭೀರ ಪೆಟ್ಟು ಕೊಟ್ಟಿದೆ.

“ಮೇಕ್ ಇನ್ ಇಂಡಿಯಾ” ಯೋಜನೆಯಡಿ ಪರಿಸರ ಸ್ನೇಹಿ ಆಶಯಗಳಿಗೆ ತದ್ವಿರುದ್ಧವಾಗಿರುವ ಈ ನಿಷೇಧವನ್ನು ವೈಜ್ಞಾನಿಕವಾಗಿ ಮತ್ತು ರಾಜತಾಂತ್ರಿಕತೆ ಮೂಲಕ ಪ್ರಶ್ನಿಸಬೇಕೆಂದು ಸಂಸದ ರಾಘವೇಂದ್ರ ಕೋರಿದ್ದಾರೆ.

ಭಾರತದ AIIMS, IISc, CCMB ಮತ್ತು CFTRI ಸಂಸ್ಥೆಗಳ ತಜ್ಞರನ್ನೊಳಗೊಂಡ ಉನ್ನತ ಮಟ್ಟದ ತಾಂತ್ರಿಕ ನಿಯೋಗವನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಕಳುಹಿಸಿ ವಾಸ್ತವಾಂಶಗಳನ್ನು ಮನದಟ್ಟು ಮಾಡಿಸಬೇಕು ಮತ್ತು ಅಡಿಕೆ ಹಾಳೆ ತಟ್ಟೆಗಳಿಗೆ ಅಂತಾರಾಷ್ಟ್ರೀಯ ವ್ಯಾಪಾರ ಮಂಡಳಿಗಳ ಮೂಲಕ ವೈಜ್ಞಾನಿಕ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ತಮ್ಮ ಪಾತ್ರದಲ್ಲಿ ರಾಘವೇಂದ್ರ ಕೇಂದ್ರ ಕೃಷಿ ಸಚಿವರನ್ನು ಕೋರಿದ್ದಾರೆ.

ಭಾರತದ ಸಂಸ್ಕೃತಿಯಲ್ಲಿ ಅಡಿಕೆ “ಮಂಗಳ ದ್ರವ್ಯ” ಮಾತ್ರವಲ್ಲ, ಅದು ಲಕ್ಷಾಂತರ ಕುಟುಂಬಗಳ ಬದುಕಿನ ಆಧಾರವಾಗಿದೆ ಎಂದು ರಾಘವೇಂದ್ರ ಹೇಳಿದ್ದಾರೆ. ಈ ಹೋರಾಟ ಕೇವಲ ಶಿವಮೊಗ್ಗದ್ದಲ್ಲ, ಇಡೀ ಭಾರತದ ಅಡಿಕೆ ಬೆಳೆಗಾರರ ಅಸ್ತಿತ್ವದ ಹೋರಾಟ ಎಂದು ಸಂಸದರು ಬಲವಾಗಿ ಪ್ರತಿಪಾದಿಸಿದ್ದಾರೆ.

ಕೇಂದ್ರ ಕೃಷಿ ಸಚಿವರ ಭರವಸೆ:

ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಖುದ್ದು ಭೇಟಿ ಮಾಡಿ ಸಂಸದ ಬಿ.ವೈ. ರಾಘವೇಂದ್ರ ಮನವಿ ಸಲ್ಲಿಸಿದ್ದು, ಸಚಿವರು ಈ ವಿಷಯದಲ್ಲಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. CPCRI ನಿರ್ದೇಶಕರ ಅಧ್ಯಕ್ಷತೆಯಲ್ಲಿ ದೇಶದ 11 ಪ್ರಮುಖ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳು ಈಗಾಗಲೇ ಅಡಿಕೆ ಕುರಿತು ಸಂಶೋಧನೆ ನಡೆಸುತ್ತಿದ್ದು, ಶೀಘ್ರದಲ್ಲೇ ಒಂದು ಸಮಗ್ರ ವರದಿ ಸಿದ್ಧವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವರದಿಯನ್ನು CPCRI, ICMR (Indian Council of Medical Research) ಗೆ ಸಲ್ಲಿಸಲಿದ್ದು, ಅಂತಿಮ ವರದಿ ಕೇಂದ್ರ ಸರ್ಕಾರಕ್ಕೆ ಲಭಿಸಿದ ತಕ್ಷಣ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಸಂಸದ ರಾಘವೇಂದ್ರ ಅವರಿಗೆ ದೃಢ ಆಶ್ವಾಸನೆ ನೀಡಿದ್ದಾರೆ.

Author