ಶಿವಮೊಗ್ಗ | ಡಾ.ಸಮೀಕ್ಷಾ ರೆಡ್ಡಿ ಸಾವಿನ ನ್ಯಾಯಕ್ಕೆ ಆಗ್ರಹ ; ಕ್ಯಾಂಡಲ್​ ಮಾರ್ಚ್​ ಮೂಲಕ ಸಂತಾಪ

ಶಿವಮೊಗ್ಗ

ಶಿವಮೊಗ್ಗ:ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದಲ್ಲಿ ನೀರಾನೆ ದಾಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡ ಯುವ ಪಶು ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಕರ್ನಾಟಕ ಪಶು ವೈದ್ಯಕೀಯ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಕ್ಯಾಂಡಲ್ ಮಾರ್ಚ್ ನಡೆಸಲಾಯಿತು.

ನೂರಾರು ಪಶು ವೈದ್ಯರು ಹಾಗೂ ವಿದ್ಯಾರ್ಥಿಗಳು ಈ ಮೌನ ಮೆರವಣಿಗೆಯಲ್ಲಿ ಭಾಗವಹಿಸಿ, ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.ಪಶುಪಾಲನಾ ಇಲಾಖೆಯಲ್ಲಿ ಡಾ. ಸಮೀಕ್ಷಾ ರೆಡ್ಡಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು.

(ನಂತರ ಅಲ್ಲಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನೆಹರು ರಸ್ತೆಯ ಮೂಲಕ ಸಾಗಿ ಗೋಪಿ ವೃತ್ತ ತಲುಪಿತು. ಈ ವೇಳೆ ಕೈಯಲ್ಲಿ ಮೇಣದ ಬತ್ತಿ ಹಿಡಿದಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಂಘದ ಸದಸ್ಯರು ಮೃತ ವೈದ್ಯೆಗೆ ಗೌರವ ಸೂಚಿಸಿ, ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕರ್ನಾಟಕ ಮಹಿಳಾ ಪಶು ವೈದ್ಯರ ಸಂಘದ ಉಪಾಧ್ಯಕ್ಷೆ ಡಾ!! . ಪವಿತ್ರಾ ಅವರು ಅರಣ್ಯ ಇಲಾಖೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ರಾತ್ರಿ 11:30ರ ಸುಮಾರಿಗೆ ಒಬ್ಬ ಮಹಿಳಾ ವೈದ್ಯೆಯನ್ನು ಯಾವುದೇ ಸುರಕ್ಷತೆ ಇಲ್ಲದೆ, ಹ್ಯಾಂಡ್ಲರ್ ಅಥವಾ ಕೀಪರ್‌ಗಳ ನೆರವಿಲ್ಲದೆ ಪ್ರಾಣಿಗಳ ಪಂಜರದ ಬಳಿ ಕಳುಹಿಸುವ ಅನಿವಾರ್ಯತೆ ಏನಿತ್ತು ಎಂದು ಪ್ರಶ್ನಿಸಿದರು.

ಐದುವರೆ ವರ್ಷ ಓದಿ ಎರಡು ವರ್ಷ ಅನುಭವ ಹೊಂದಿದ್ದ ವೈದ್ಯೆಯನ್ನು ಕೇವಲ ಅಪ್ರೆಂಟಿಸ್ ಎಂದು ಕರೆದು ಇಲಾಖೆಯು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ದಿನಕ್ಕೆ 650 ರೂಪಾಯಿ ಗೌರವಧನಕ್ಕೆ ಡಾ. ಸಮೀಕ್ಷಾ ಅವರನ್ನು ದುಡಿಸಿಕೊಳ್ಳಲಾಗುತ್ತಿತ್ತು. ಆದರೆ, ಆ ಮೊತ್ತವೂ ಅವರಿಗೆ ಸರಿಯಾಗಿ ಸಂದಾಯವಾಗಿಲ್ಲ ಎಂಬ ಮಾಹಿತಿ ನೀಡಿದ ಡಾ. ಪವಿತ್ರಾ, ಅರಣ್ಯ ಇಲಾಖೆಯೇ ಈ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ಸಾಕ್ಷಿ ನಾಶವಾಗುವ ಸಂಭವವಿದೆ ಎಂದರು.

ಆದ್ದರಿಂದ ಪ್ರಕರಣವನ್ನು ಕೂಡಲೇ ಸಿಐಡಿ ತನಿಖೆಗೆ ಹಸ್ತಾಂತರಿಸಬೇಕು ಹಾಗೂ ಮೃತ ವೈದ್ಯೆಯ ಸ್ಮರಣಾರ್ಥ ಬನ್ನೇರುಘಟ್ಟದಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪಶುವೈದ್ಯಕೀಯ ವಿದ್ಯಾರ್ಥಿ ಅವಿನಾಶ್ ಎಸ್.ಕೆ ಮಾತನಾಡಿ, ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ ಇಂತಹ ಶೋಚನೀಯ ಸಾವು ಸಂಭವಿಸಿರುವುದು ದುರಂತ. ಸಮೀಕ್ಷಾ ಅವರನ್ನು ಹುತಾತ್ಮ ಎಂದು ಪರಿಗಣಿಸಬೇಕು ಹಾಗೂ ಸರ್ಕಾರ ಘೋಷಿಸಿರುವ 30 ಲಕ್ಷ ರೂಪಾಯಿ ಪರಿಹಾರ ಮೊತ್ತ ಅತ್ಯಂತ ಕಡಿಮೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೃತ ವೈದ್ಯೆಯ ಹೆಸರಿನಲ್ಲಿ ಮಹಿಳಾ ಪಶು ವೈದ್ಯರ ಸಂರಕ್ಷಣಾ ಸಂಘವನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.

Author