ಚಿಕ್ಕಮಗಳೂರು, ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪ ಪ್ರಯಾಣಿಕರಿಂದ ತುಂಬಿದ್ದ ಬಸ್ ಚಲಿಸುತ್ತಿದ್ದಾಗಲೇ ಚಕ್ರ ಕಳಚಿ ಬಿದ್ದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಬಾಳೆಹೊನ್ನೂರಿನ ಕಾಲಭೈರವೇಶ್ವರ ದೇವಸ್ಥಾನದ ಬಳಿ ಘಟನೆ ಸಂಭವಿಸಿದೆ.
ಬಸ್ ವೇಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಕ್ರ ಬೇರ್ಪಟ್ಟಿದೆ. ತಕ್ಷಣ ಎಚ್ಚೆತ್ತ ಚಾಲಕ ಬಸ್ಸನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಹತ್ತಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಕ್ಷಾಂತರ ಕಿಲೋಮೀಟರ್ ಓಡಿ ಗುಜರಿ ಸ್ಥಿತಿಯಲ್ಲಿರುವ ಹಳೇ ಬಸ್ಸುಗಳನ್ನು ಸರಿಯಾದ ತಾಂತ್ರಿಕ ತಪಾಸಣೆ ಮಾಡದೆ ರಸ್ತೆಗೆ ಇಳಿಸುತ್ತಿರುವುದೇ ಇಂತಹ ಘಟನೆಗಳಿಗೆ ಮೂಲ ಕಾರಣ ಎಂದು ಪ್ರಯಾಣಿಕರು ಕಿಡಿಕಾರಿದ್ದಾರೆ.
ಸ್ಥಳಕ್ಕೆ ಬಾಳೆಹೊನ್ನೂರುಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಕ್ರಮ ಕೈಗೊಂಡಿದ್ದಾರೆ.



