ಆರ್‌ಸಿಬಿ ಪಂದ್ಯಗಳ ಅಧಿಕೃತ ಟಿಕೆಟ್ ಇದ್ದರೆ ನಮ್ಮ ಮೆಟ್ರೋ ಪ್ರಯಾಣ ಉಚಿತ

ಕ್ರೀಡೆ

ಬೆಂಗಳೂರು, ಐಪಿಎಲ್ ಆರಂಭಕ್ಕೆ ಒಂದು ವಾರ ಬಾಕಿಯಿದೆ. ತವರಿನ ಪಂದ್ಯಗಳನ್ನು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ಪಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತನ್ನ ಅಭಿಮಾನಿಗಳಿಗೆ ಬಂಪರ್ ಆಫರ್‌ವೊಂದನ್ನು ನೀಡಿದೆ.

ಈ ಬಾರಿ ಅಧಿಕೃತವಾಗಿ ಪಂದ್ಯಗಳ ಟಿಕೆಟ್ ಖರೀದಿಸಿದವರಿಗೆ ‘ನಮ್ಮ ಮೆಟ್ರೋ’ದಲ್ಲಿ ಉಚಿತ ಪ್ರಯಾಣದ ಅವಕಾಶ ಸಿಗಲಿದೆ.ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಖರೀದಿಸಿದವರಿಗೆ ಅದರ ಜೊತೆಗೆ ಮೆಟ್ರೋ ಪ್ರಯಾಣದ ಕ್ಯೂಆರ್ ಕೋಡ್ ಸಹ ಲಭ್ಯವಾಗಲಿದೆ.

ಟಿಕೆಟ್ ಹೊಂದಿರುವವರು ಮೆಟ್ರೋ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಉಚಿತ ಪ್ರಯಾಣದ ಸೌಲಭ್ಯ ಪಡೆದುಕೊಳ್ಳಬಹುದು.

ಟಿಕೆಟ್‌ ಖರೀದಿ ಹೇಗೆ?:

ಈ ಬಾರಿ ಆರ್‌ಸಿಬಿ ತಂಡದ ತವರಿನ ಪಂದ್ಯಗಳಿಗೆ ಆನ್‌ಲೈನ್ ಟಿಕೆಟ್‌ಗಳಿಗೆ ಮಾತ್ರವೇ ಆದ್ಯತೆ ನೀಡಲಾಗಿದೆ. ತಂಡದ ಅಧಿಕೃತ ವೆಬ್‌ಸೈಟ್‌ (SHOP.ROYALCHALLENGERS.COM) ಅಥವಾ ಆ್ಯಪ್ ಮೂಲಕ ಅಭಿಮಾನಿಗಳು ಟಿಕೆಟ್ ಖರೀದಿಸಬಹುದು.

ಶೀಘ್ರದಲ್ಲೇ ಟಿಕೆಟ್ ಮಾರಾಟದ ದಿನಾಂಕ ಪ್ರಕಟವಾಗಲಿದೆ. ಯಾವುದೇ ಇತರ ವೆಬ್‌ಸೈಟ್ ಅಥವಾ ವ್ಯಕ್ತಿಯು ಟಿಕೆಟ್ ಮಾರಾಟದ ಹಕ್ಕು ಹೊಂದಿಲ್ಲ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.

ಟಿಕೆಟ್‌ ಖರೀದಿಸುವವರು ಸೀಮಿತವಾದ ವಾಹನ ಪಾರ್ಕಿಂಗ್ ಸ್ಥಳಗಳನ್ನು ಮುಂಗಡವಾಗಿ ಬುಕ್ ಮಾಡಬಹುದು. ಪಾರ್ಕಿಂಗ್ ಸ್ಥಳದಿಂದ ಕಬ್ಬನ್ ರಸ್ತೆಯವರೆಗೆ ಪಿಕ್ ಅಪ್ ಮತ್ತು ಡ್ರಾಪ್ ಶಟಲ್ ಸೇವೆ ಲಭ್ಯವಿರಲಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ತಿಳಿಸಿದೆ.

ಐಪಿಎಲ್​ ಯಾವಾಗ ಪ್ರಾರಂಭ?:

2026ರ ಐಪಿಎಲ್ ಟೂರ್ನಿ ಮಾರ್ಚ್ 28ರಿಂದ ಪ್ರಾರಂಭಗೊಳ್ಳಲಿದೆ. ಈ ಸಂಬಂಧ ಮೊದಲ ಹಂತದ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹೊಸ್ತಿಲಲ್ಲಿರುವ ಕಾರಣ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ.

ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಸನ್​ ರೈಸರ್ಸ್​ ಹೈದರಾಬಾದ್​ (SRH) ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿಕೊಳ್ಳುತ್ತಿದೆ.

Author