ಚಿಕ್ಕಮಗಳೂರು,ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕೇವಲ ದಂಡ ವಿಧಿಸಿದರೆ ಸಾಲದು, ಅವರಿಗೂ ತಮ್ಮ ತಪ್ಪಿನ ಅರಿವಾಗಬೇಕು ಎಂಬ ಉದ್ದೇಶದಿಂದ ನ್ಯಾಯಾಲಯವೊಂದು ವಿಶಿಷ್ಟವಾದ ‘ಕಮ್ಯುನಿಟಿ ಸೇವೆ’ಯ ಶಿಕ್ಷೆಯನ್ನು ಪ್ರಕಟಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮರವಂಜಿ ಸರ್ಕಲ್‌ನಲ್ಲಿ ವ್ಯಕ್ತಿಯೊಬ್ಬ ದಿನಪೂರ್ತಿ ಬೋರ್ಡ್ ಹಿಡಿದು ನಿಲ್ಲುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾನೆ.
ಕಡೂರು ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ನಿವಾಸಿಯಾದ ರಂಜಿತ್ ಎಂಬಾತ ಈ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಈತ ಈ ಹಿಂದೆ ಪದೇ ಪದೇ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಾಲನೆ ಮಾಡಿದ್ದ ಎನ್ನಲಾಗಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ರಂಜಿತ್ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರಿಂದ, ನ್ಯಾಯಾಧೀಶರು ಆತನಿಗೆ ವಿಭಿನ್ನವಾದ ಶಿಕ್ಷೆಯನ್ನು ವಿಧಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ, ರಂಜಿತ್ ಮಾರ್ಚ್ 17 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕಡೂರು ಪಟ್ಟಣದ ಪ್ರಮುಖ ವೃತ್ತವಾದ ಮರವಂಜಿ ಸರ್ಕಲ್‌ನಲ್ಲಿ ಸಂಚಾರ ಜಾಗೃತಿಯ ಬೋರ್ಡ್ ಹಿಡಿದು ನಿಲ್ಲಬೇಕಾಯಿತು.
ಈ ವಿಶಿಷ್ಟ ಶಿಕ್ಷೆಯು ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ತಪ್ಪಿತಸ್ಥರಲ್ಲಿ ಪಶ್ಚಾತ್ತಾಪ ಮೂಡಿಸಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ವಿಶೇಷವೆಂದರೆ, ಶಿಕ್ಷೆಗೆ ಗುರಿಯಾದ ವ್ಯಕ್ತಿ ಸರಿಯಾಗಿ ಬೋರ್ಡ್ ಹಿಡಿದು ನಿಲ್ಲುತ್ತಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಲು ಓರ್ವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ನ್ಯಾಯಾಲಯ ಸೂಚಿಸಿತ್ತು.
ಸವಾರನ ವರ್ತನೆಯ ಬಗ್ಗೆ ಸಂಜೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆಯೂ ಪೊಲೀಸರಿಗೆ ಆದೇಶಿಸಲಾಗಿತ್ತು. ಈ ಘಟನೆಯು ಕಡೂರು ತಾಲೂಕಿನಲ್ಲಿ ಸಂಚಲನ ಮೂಡಿಸಿದ್ದು, ಸಂಚಾರ ನಿಯಮ ಉಲ್ಲಂಘಿಸುವವರಿಗೆ ಇದೊಂದು ತಕ್ಕ ಪಾಠ ಎಂದು ಜನರು ಚರ್ಚಿಸಿಕೊಳ್ಳುತ್ತಿದ್ದಾರೆ.



