ರಾಜ್ಯದ ಜನರ ಆರೋಗ್ಯದ ಜತೆಗೆ ಸರ್ಕಾರ ಚೆಲ್ಲಾಟ : ಡಾ.ಧನಂಜಯ ಸರ್ಜಿ ಆರೋಪ

ರಾಜಕೀಯ

ಬೆಂಗಳೂರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳಿಲ್ಲದೆ ರೋಗಿಗಳು ಕಂಗಾಲಾಗಿದ್ದು, ರಾಜ್ಯದ ಬಹುತೇಕ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ಜ್ವರ, ನೋವು ನಿವಾರಕ ಮಾತ್ರೆಗಳಿಂದ ಹಿಡಿದು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬೇಕಾದ ಇಂಜೆಕ್ಷನ್‌ಗಳವರೆಗೆ ಯಾವುದೂ ಲಭ್ಯವಿಲ್ಲ.

ರಾಜ್ಯ ಸರ್ಕಾರವು ಬಡವರ ಆರೋಗ್ಯದ ವಿಚಾರದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ. ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಸೋಮವಾರ ವಿಧಾನ ಪರಿಷತ್ ಕಲಾಪದಲ್ಲಿ ಮಾತನಾಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡುರಾವ್ ಅವರಿಗೆ ಪ್ರಶ್ನೆ ಕೇಳಿದ ಅವರು, ರಾಜ್ಯದಲ್ಲಿ ವೈದ್ಯರ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ ಏಕೆಂದರೆ ಕನಿಷ್ಠ ಔಷಧಿಗಳನ್ನು ಇಡಬೇಕು ಎಂದು ಅಧಿಕಾರಿಗಳು ವೈದ್ಯರಿಗೆ ನೋಟಿಸ್ ಕೊಡುತ್ತಿದ್ದಾರೆ, ಈ ಕಡೆ ಆಸ್ಪತ್ರೆಗೆ ಬರುವ ರೋಗಿಗಳು ವೈದ್ಯರ ಜೊತೆ ಜಗಳ ಮಾಡುತ್ತಿದ್ದಾರೆ.

ಔಷಧಗಳನ್ನು ಪೂರೈಸಬೇಕಾದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (KSMSCL) ಸಂಪೂರ್ಣವಾಗಿ ಹಳಿ ತಪ್ಪಿದೆ. ನಾಳೆಯಿಂದ ಎಲ್ಲಾ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ ಈ ರೀತಿ ಜನರ ಆರೋಗ್ಯದ ಜತೆಗೆ ಸರ್ಕಾರ ಆಟವಾಡುತ್ತಿರುವುದು ಎಷ್ಟು ಸರಿ ಎಂದು ಕೇಳಿದರು.

ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 14 ಕೋಟಿ ಓ.ಪಿ.ಡಿ ಮತ್ತು ಐ.ಪಿ.ಡಿ ರೋಗಿಗಳ ತಪಾಸಣೆ ಆಗಿದೆ, 2024-25ರಲ್ಲಿ 15 ಕೋಟಿ ರೋಗಿಗಳ ತಪಾಸಣೆ ಆಗಿದೆ , 2025-26 ರಲ್ಲಿ 15 ರಿಂದ 16 ಕೋಟಿ ಅಂದಾಜಿಸಲಾಗಿದೆ, ಹಿಂದಿನ ವರ್ಷ ಮತ್ತು ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಔಷಧ ಉಗ್ರಾಣದಲ್ಲಿ ಔಷದಿ ಸಂಗ್ರಹಣೆ ಶೇ 50ರಷ್ಟು ಕಡಿಮೆ ಆಗಿದೆ ಎಂದು ಹೇಳಿದರು.

ಶಾಸಕರ ಪ್ರಶ್ನೆಗೆ ಆರೋಗ್ಯ ಸಚಿವರು ಉತ್ತರಿಸಿದ್ದು ಸಚಿವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಇದು ರಾಜ್ಯದ ಅತ್ಯಂತ ಗಂಭೀರ ಸಮಸ್ಯೆ ಆಗಿದ್ದು ಈ ಬಗ್ಗೆ ಚರ್ಚೆಗೆ ಇನ್ನು ಹೆಚ್ಚಿನ ಕಾಲಾವಕಾಶ ಬೇಕು ಎಂದು ಪಟ್ಟು ಹಿಡಿದ ಮೇರೆಗೆ ಮಾನ್ಯ ಸಭಾಪತಿಗಳು 30 ನಿಮಿಷಗಳ ಕಾಲಾವಕಾಶ ನೀಡುತ್ತೆನೆ ಎಂದು ಹೇಳಿರುತ್ತಾರೆ.

Author