ನವದೆಹಲಿ: ಕೇಂದ್ರ ಲೋಕಸೇವಾ ಸೇವಾ ಆಯೋಗದ (ಯುಪಿಎಸ್ಸಿ) 2025ನೇ ಸಾಲಿನ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಿದ್ದು, ಕರ್ನಾಟಕದ ಕಿರಣ್ ಕಮಾಟೆ ಅವರು ರಾಜ್ಯಕ್ಕೆ ಮೊದಲ ಮತ್ತು ದೇಶಕ್ಕೆ 53ನೇ ರ‍್ಯಾಂಕ್ ಪಡೆದಿದ್ದಾರೆ.
ರಾಜ್ಯದ 20 ಮಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.ಒಟ್ಟು 958 ಅಭ್ಯರ್ಥಿಗಳು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅವರನ್ನು ವಿವಿಧ ಕೇಂದ್ರ ನಾಗರಿಕ ಸೇವೆಗಳಿಗೆ (IAS, IFS, IPS,) ನೇಮಕ ಮಾಡಲಾಗಿದೆ ಎಂದು ಆಯೋಗ ತಿಳಿಸಿದೆ.
ಅನುಜ್ ಅಗ್ನಿಹೋತ್ರಿ ದೇಶಕ್ಕೇ ನಂ.1: ಆಲ್ ಇಂಡಿಯಾ ರ‍್ಯಾಂಕಿಂಗ್ ನಲ್ಲಿ ರಾಜಸ್ಥಾನದ ಅನುಜ್ ಅಗ್ನಿಹೋತ್ರಿ ಅವರು ದೇಶಕ್ಕೇ ನಂ.1 ಸ್ಥಾನ ಪಡೆದಿದ್ದಾರೆ.
ಎಂ.ರಾಜೇಶ್ವರಿ ಸುವೆ ಮತ್ತು ಆಕಾಶ್ ಧುಲ್ ಕ್ರಮವಾಗಿ ಎರಡು ಮತ್ತು ಮೂರನೇ ಶ್ರೇಯಾಂಕ ಪಡೆದಿದ್ದಾರೆ.ಇನ್ನೂ, 348 ಅಭ್ಯರ್ಥಿಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಇರಿಸಲಾಗಿದೆ.
1,087 ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸರ್ಕಾರ ಸೂಚಿಸಿತ್ತು. ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳು, ನೇಮಕಾತಿಗಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಸ್ಪಷ್ಟೀಕರಣ ಬೇಕಾದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 23385271/23381125/23098543 ಸಂಪರ್ಕಿಸಬಹುದು ಎಂದು ಆಯೋಗ ತಿಳಿಸಿದೆ.
15 ದಿನದ ಬಳಿಕ ಅಂಕ ಪ್ರಕಟ: ಇಂದು ಅಭ್ಯರ್ಥಿಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಇದಾದ 15 ದಿನಗಳಲ್ಲಿ ಅವರು ಪಡೆದ ಅಂಕಗಳನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಯುಪಿಎಸ್ಸಿ ತಿಳಿಸಿದೆ.



