ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಗ್ರೂಪ್ ಡಿ ನೌಕರರ ಸಂಘದ ವತಿಯಿಂದ ಎಸ್. ಮಧು ಬಂಗಾರಪ್ಪ , ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ಕರ್ನಾಟಕ ಸರ್ಕಾರ ಇವರಿಗೆ ದಿನಾಂಕ:26/11/2025ರಂದು ಸಲ್ಲಿಸಲಾಗಿದ್ದ ಮನವಿಯ ಮೇರೆಗೆ ಸಚಿವರ ನಿರ್ದೇಶನದಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:04/03/2026ರಂದು ಸರ್ಕಾರದ ಹಂತದಲ್ಲಿ ಸಭೆಯನ್ನು ನಡೆಸಲಾಗಿದೆ .
ಸದರಿ ಸಭೆಯಲ್ಲಿ ವಿಕಾಸ್ ಕಿಶೋರ್ ಸುರಳ್ಕರ್ , ಮಾನ್ಯ ಆಯುಕ್ತರು, ಶಾ.ಶಿ.ಇ. ಮತ್ತು ಶ್ರೀಮತಿ ವಿಜಯ ಈ ರವಿಕುಮಾರ್ , ನಿರ್ದೇಶಕರು(ಆಡಳಿತ), ಶಾ.ಶಿ.ಇ. ಶ್ರೀ ಕೃಷ್ಣಾ, ಎಸ್. ಕರೀಚಣ್ಣನವರ್ ರವರು, ನಿರ್ದೇಶಕರು, ಪ್ರೌಢ ಶಿಕ್ಷಣ, ಶಾ.ಶಿ.ಇ. ರವರು ಇವರುಗಳ ಸಮಕ್ಷಮದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ನವೀನ, ಎಸ್. ಆರ್. ಗೌರವಾಧ್ಯಕ್ಷರಾದ ದೇವರಾಜು, ಜಿ. ಕಾರ್ಯಾಧ್ಯಕ್ಷರಾದ ಪೃಥ್ವಿ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಆನಂದ್, ಕೆ.ಬಿ. ಖಜಾಂಚಿಗಳಾದ ರವೀಶ್, ಕೆ.ಸಿ., ಸಹಕಾರ್ಯದರ್ಶಿಗಳಾದ ಸುಬ್ರಮಣ್ಯ ಜಾಧವ್, ಸಂಘಟನಾ ಕಾರ್ಯದರ್ಶಿಗಳಾದ ವಿನಯ್ ಪ್ರಸಾದ್, ಎಂ. ವಿಶೇಷ ಘಟಕದ ಅಧ್ಯಕ್ಷರು ಮತ್ತು ಲೆಕ್ಕಾಧೀಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ರಾಜೇಂದ್ರ ಸಜ್ಜನ್, ಲೆಕ್ಕಾಧೀಕ್ಷಕರುಗಳಾದ ಗೋವಿಂದರಾವ್, ನವೀನ (ಶ್ರೀಮತಿ ಉಮಾಶ್ರೀ ರವರು, ಮಾನ್ಯ ಶಾಸಕರು, ಕರ್ನಾಟಕ ವಿಧಾನ ಪರಿಷತ್ತು ಇವರ ಆಪ್ತ ಸಹಾಯಕರು), ಅಧೀಕ್ಷಕರಾದ ಸೈಮನ್ ಮರಿರಾಜ್ ರವರು ಉಪಸ್ಥಿತರಿದ್ದರು.
ಮುಂದುವರೆದು, ಸಭೆಯಲ್ಲಿ ಈ ಕೆಳಕಂಡ ಅಂಶಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು:-
ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕುರಿತು :-
ಈ ವಿಚಾರಕ್ಕೆ ಸಂಬಂಧಿಸಿದಂತೆ 1967ರಿಂದ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಬೋಧಕೇತರ ನೌಕರರಿಗೆ ಅನ್ವಯವಾಗುವಂತೆ ಪ್ರತ್ಯೇಕವಾಗಿ ಪರಿಷ್ಕರಿಸುವಂತೆ ಕೋರಿಕೊಂಡ ಮನವಿಯ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸ್ಪಂದಿಸುವುದರೊಂದಿಗೆ ಕರಡನ್ನು ಅಂತಿಮಗೊಳಿಸುತ್ತಿದ್ದು, ಸದ್ಯದಲ್ಲಿಯೇ ಪ್ರಕಟ ಮಾಡುವುದಾಗಿ ತಿಳಿಸಿದರು.
ಈ ಮಧ್ಯೆ ಕೆಲವು ಹುದ್ದೆಗಳಲ್ಲಿ ಗೊಂದಲಗಳ ಬಗ್ಗೆ ಮತ್ತು ಇಲಾಖೆಗೆ 2015ರಲ್ಲಿ ಮಂಜೂರಾಗಿರುವ ಪ್ರಥಮ ದರ್ಜೆ ಲೆಕ್ಕಸಹಾಯಕ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ (ಪರೀಕ್ಷಾ ವಿಭಾಗದಿಂದ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಗೆ ಸ್ಥಳಾಂತರ ಮಾಡಿದ ನಂತರ ಮಂಡಲಿಯಲ್ಲಿನ ಕೆಲವು ಹುದ್ದೆಗಳನ್ನು ಸೇರ್ಪಡೆಗೊಳಿಸಲು ಸಂಘದಿಂದ ಮನವಿ ಮಾಡಿದ ಕಾರಣ ಹುದ್ದೆಗಳ ಗೊಂದಲಗಳನ್ನು ಸರಿಪಡಿಸುವುದರೊಂದಿಗೆ ಮತ್ತು ಹುದ್ದೆಗಳನ್ನು ಕರಡಿನಲ್ಲಿ ಸೇರ್ಪಡೆಗೊಳಿಸುವಂತೆ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.

ಮುಂದುವರೆದು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಗೊಂದಲ, ಸಮಸ್ಯೆಗಳಿದ್ದಲ್ಲಿ ಕರಡು ಪ್ರಕಟಿಸಿದ ನಂತರ ಆಕ್ಷೇಪಣೆ ನೀಡುವ ಮೂಲಕ ಸರಿಪಡಿಸಿಕೊಳ್ಳಬೇಕೆಂದು ಸಭೆಯಲ್ಲಿ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ವೃಂದದ ಮುಂಬಡ್ತಿ ಕುರಿತು:-
ಈ ವಿಚಾರಕ್ಕೆ ಸಂಬಂಧಿಸಿದಂತೆ, ಧಾರವಾಡ ಆಯುಕ್ತಾಲಯ ವ್ಯಾಪ್ತಿಯಲ್ಲಿ ಪತ್ರಾಂಕಿತ ಸಹಾಯಕರು ಹುದ್ದೆಗೆ ಬಡ್ತಿ ನೀಡಲಾದ ಆದೇಶವನ್ನು ರದ್ದುಪಡಿಸಿರುವುದನ್ನು ಪ್ರಸ್ತಾಪಿಸುತ್ತಾ, ಬೆಂಗಳೂರು ಮತ್ತು ಕಲಬುರಗಿ ಆಯುಕ್ತಾಲಯದಲ್ಲಿ ಈ ಹುದ್ದೆಗೆ ಬಡ್ತಿ ನೀಡಿರುವುದನ್ನು ಕುರಿತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಪರಿಶೀಲನೆ ಮಾಡಿ ವರದಿ ನೀಡುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.
ಮತ್ತು ಕೌನ್ಸಿಲಿಂಗ್ ಮೂಲಕ ಖಾಲಿ ಇರುವ ಬೋಧಕೇತರ ವೃಂದದ ಎಲ್ಲಾ ಹುದ್ದೆಗಳಿಗೆ ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 380 ಸೆನೆನಿ 2025. ದಿನಾಂಕ:12.02.2026 ರ ಅನ್ವಯ ಬಡ್ತಿ ನೀಡುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಬಡ್ತಿ ನೀಡುವ ಕುರಿತು ಅಗತ್ಯ ಕ್ರಮವಹಿಸುವಂತೆ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.
ಹೊಸ ಹುದ್ದೆಗಳ ಮಂಜೂರಾತಿ ಕುರಿತು:-ಈ ವಿಚಾರಕ್ಕೆ ಸಂಬಂಧಿಸಿದಂತೆ, ಹೊಸದಾಗಿ ಸೃಜನೆಯಾಗಿರುವ ಉಪನಿರ್ದೇಶಕರ ಕಛೇರಿ, ಬಿ.ಇ.ಓ. ಕಛೇರಿ, ಕೆ.ಪಿ.ಎಸ್. ಹೊಸ ಸರ್ಕಾರಿ ಪ್ರೌಢ ಶಾಲೆಗಳು, ಉನ್ನತೀಕರಿಸಿದ ಶಾಲೆಗಳಲ್ಲಿ ಬೋಧಕೇತರ ಹುದ್ದೆಗಳನ್ನು ಮಂಜೂರು ಮಾಡಬೇಕೆಂದು ಹಾಗೂ ಹಾಲಿ ಇರುವಂತಹ ಗ್ರೂಪ್ ಡಿ ನೌಕರ ವೃಂದದ ಖಾಲಿ ಹುದ್ದೆಗಳನ್ನು ಹೊರ ಗುತ್ತಿಗೆ/ಗುತ್ತಿಗೆ ಆಧಾರದ ಮೇಲೆ ಇತರೆ ಇಲಾಖೆಗಳಲ್ಲಿ ಭರ್ತಿ ಮಾಡುವಂತೆ ಸಂಘದ ವತಿಯಿಂದ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.
ಅಕ್ಷರ ದಾಸೋಹ / ಮಧ್ಯಾಹ್ನಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಬೋಧಕೇತರ ವೃಂದದ ನೌಕರರನ್ನು ಪರಿಗಣಿಸುವ ಕುರಿತು:-
ಈ ವಿಚಾರಕ್ಕೆ ಸಂಬಂಧಿಸಿದಂತೆ, ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವ ಮೂಲಕ ಮಾಡಿಕೊಂಡ ಮನವಿಯ ಮೇರೆಗೆ ಪ್ರಸ್ತಾವನೆಯನ್ನು ಪರಿಶೀಲನೆ ಮಾಡುವುದಾಗಿ ಮಾನ್ಯರು ತಿಳಿಸಿದರು.
ಬೋಧಕೇತರ ನೌಕರರಿಗೆ ಸಮಯೋಚಿತವಾಗಿ ತರಬೇತಿಗಳನ್ನು ನೀಡುವ ಕುರಿತು:-ಈ ವಿಷಯಕ್ಕೆ ಸಂಬಂಧಿಸಿದಂತೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಕಛೇರಿಯ ಸುಗಮ ನಿರ್ವಹಣೆಗಾಗಿ ಒಂದು ವೃಂದದಿಂದ ಇನ್ನೊಂದು ವೃಂದಕ್ಕೆ ಇತ್ತೀಚೆಗೆ ಮುಂಬಡ್ತಿ ಹೊಂದಿದ ಮತ್ತು ಹೊಸದಾಗಿ ನೇಮಕಾತಿ ಹೊಂದಿದ ಬೋಧಕೇತರ ನೌಕರರಿಗೆ ಅಗತ್ಯ ತರಬೇತಿಯನ್ನು ನೀಡಿ ವಿಷಯ ಪರಿಣಿತಿಯೊಂದಿಗೆ ವೃತ್ತಿ ಕ್ಷಮತೆಯನ್ನು ಹೆಚ್ಚಿಸುವಂತೆ ಸಂಘದ ವತಿಯಿಂದ ಕೋರಿಕೊಂಡ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ತುರ್ತು ಕ್ರಮ ವಹಿಸುವಂತೆ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.

ಕಾರ್ಯನಿರ್ವಹಣಾ ವರದಿಯ ಅಂಗೀಕಾರ ಮತ್ತು ವಿಶೇಷ ವರದಿಯನ್ನು ಪರಿಗಣಿಸುವ ಕುರಿತು:-
ಶಾಲಾ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕೇತರ ವೃಂದದ ನೌಕರರ ಕಾರ್ಯ ನಿರ್ವಹಣಾ ವರದಿಯ ಅಂಗೀಕಾರ ಮತ್ತು ವಿಶೇಷ ವರದಿಯನ್ನು ಪರಿಗಣಿಸುವ ಮತ್ತು ಆನ್ ಲೈನ್ ಮೂಲಕ e-par/e-PRS ತಂತ್ರಾಂಶದಲ್ಲಿ ಜಾರಿಗೊಳಿಸುವಂತೆ ಸಂಘದ ವತಿಯಿಂದ ಕೋರಿಕೊಂಡ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಸೇವಾವಹಿ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ವಿಶೇಷ ವರದಿಗಳನ್ನು ಪರಿಗಣಿಸುವಂತೆ ಮತ್ತು ವಿಶೇಷ ವರದಿಗಳಿಗೆ ಸಹಿ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಕುರಿತು ಹಾಗೂ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್ -ಎ ಮತ್ತು ಗ್ರೂಪ್-ಬಿ ವೃಂದದ ಅಧಿಕಾರಿಗಳಿಗೆ ಕಾರ್ಯನಿರ್ವಹಣಾ ವರದಿಗಳನ್ನು ಸಿ.ಆ.ಸು.ಇಲಾಖೆಯ ಅಧಿಸೂಚನೆಗಳ ಅನ್ವಯ ಆನ್ ಲೈನ್ ಮೂಲಕ e̲-par/e-PRS ತಂತ್ರಾಂಶದಲ್ಲಿ ಜಾರಿಗೊಳಿಸಿರುವಂತೆ ಯಥಾವತ್ತಾಗಿ ಗ್ರೂಪ್- ಸಿ ವೃಂದದವರಿಗೂ ಸಹ e̲-par/e-PRS ತಂತ್ರಾಂಶದಲ್ಲಿ ಕಾರ್ಯ ನಿರ್ವಹಣಾ ವರದಿಗಳನ್ನು ದಾಖಲಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.
ಬೋಧಕೇತರ ನೌಕರರ ವರ್ಗಾವಣೆ ಪ್ರಕ್ರಿಯೆ ಕುರಿತು:-
ಕೆಲವು ಇಲಾಖೆಗಳಲ್ಲಿನ ನೌಕರರಿಗೆ ಹಾಗೂ ಶಿಕ್ಷಕರಿಗೆ ವರ್ಗಾವಣೆ ಕೌನ್ಸಿಲಿಂಗ್ ನಡೆಸುವ ಮಾದರಿಯಲ್ಲಿಯೇ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕೇತರ ನೌಕರರಿಗೂ ಸಹ ಜಿಲ್ಲೆ, ವಿಭಾಗ ಮತ್ತು ಅಂತರ್ ವಿಭಾಗವಾರು ವರ್ಗಾವಣೆ ಪ್ರಕ್ರಿಯೆಯನ್ನು ಪ್ರತೀ ವರ್ಷವೂ ನಡೆಸುವುದು ಎಂಬುದಾಗಿ ಸಂಘದ ವತಿಯಿಂದ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಕೋರಿಕೊಂಡ ಹಿನ್ನೆಲೆಯಲ್ಲಿ ಈ ಕುರಿತು ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಪ್ರಸ್ತಾವನೆಯನ್ನು ಸಂಘದಿಂದ ಮಾನ್ಯ ಆಯುಕ್ತರಿಗೆ ಕೂಡಲೇ ಸಲ್ಲಿಸುವಂತೆ ಹಾಗೂ ಸಂಘದ ಮನವಿಯ ಮೇರೆಗೆ ಬೋಧಕೇತರ ನೌಕರರ ವರ್ಗಾವಣೆ ಕೌನ್ಸಿಲಿಂಗ್ ಗೆ ಅಗತ್ಯವಿರುವ ರೂಪು ರೇಷೆಗಳನ್ನು ರಚಿಸುವ ಮೂಲಕ 2026ರ ಸಾರ್ವತ್ರಿಕ ವರ್ಗಾವಣೆಯನ್ನು ಸಹ ಹೊಸ ರೂಪುರೇಷೆಗಳನ್ವಯ ಕೌನ್ಸಿಲಿಂಗ್ ಮೂಲಕ ಮಾಡಲು ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.
ಕಛೇರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಹಾಗೂ ಇ-ಆಫೀಸ್ ತಂತ್ರಾಂಶವನ್ನು ಕಡ್ಡಾಯವಾಗಿ ಜಿಲ್ಲಾ ಹಾಗೂ ತಾಲ್ಲೂಕು ಹಂತದ ಕಛೇರಿಗಳಲ್ಲಿ ಅನುಷ್ಠಾನಗೊಳಿಸುವ ಕುರಿತು:-
ಈ ವಿಷಯಕ್ಕೆ ಸಂಬಂಧಿಸಿದಂತೆ, ತಾಲ್ಲೂಕು ಮತ್ತು ಜಿಲ್ಲಾ ಹಂತದ ಕಛೇರಿಗಳಲ್ಲಿ ದೈನಂದಿನ ಕಾರ್ಯನಿರ್ವಹಣೆಗೆ ಅವಶ್ಯಕವಿರುವ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಬ್ಯಾಟರಿ, ಯು.ಪಿ.ಎಸ್, ಇಂಟರ್ನೆಟ್, ಪೀಠೋಪಕರಣಗಳು, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್ ಇತ್ಯಾದಿ ಅಗತ್ಯ ವಸ್ತುಗಳನ್ನು ಒದಗಿಸುವುದು. ಇಲಾಖೆಯ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕು ಹಂತದ ಕಛೇರಿಗಳಲ್ಲಿ ಇ-ಆಫೀಸ್ ತಂತ್ರಾಂಶವನ್ನು ತುರ್ತಾಗಿ ಅಳವಡಿಸುವುದರೊಂದಿಗೆ ಬಳಕೆಯನ್ನು ಕಡ್ಡಾಯಗೊಳಿಸುವುದರ ಬಗ್ಗೆ ಸಂಘದ ವತಿಯಿಂದ ಕೋರಿಕೊಂಡ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸುವುದರೊಂದಿಗೆ ಈ ವರ್ಷ ಸಾಕಷ್ಟು ಕಛೇರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಇ-ಆಫೀಸ್ ತಂತ್ರಾಂಶವನ್ನು ಕಡ್ಡಾಯವಾಗಿ ಜಿಲ್ಲಾ ಹಾಗೂ ತಾಲ್ಲೂಕು ಹಂತದ ಕಛೇರಿಗಳಲ್ಲಿ ಅನುಷ್ಠಾನಗೊಳಿಸುವುದಾಗಿ ತಿಳಿಸಿದರು.
ಮಹಿಳಾ ನೌಕರರಿಗೆ ಕಛೇರಿಗಳಲ್ಲಿ ಪ್ರತ್ಯೇಕವಾಗಿ ಮಹಿಳಾ ವಿಶ್ರಾಂತಿ ಕೊಠಡಿಗಳನ್ನು ಕಾಯ್ದಿರಿಸುವ ಕುರಿತು:-
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಬೋಧಕೇತರ ಮಹಿಳಾ ನೌಕರರು ಹಾಗೂ ಮಹಿಳಾ ಶಿಕ್ಷಕಿಯರಿಗೆ ಅನುಕೂಲವಾಗುವಂತೆ ಕಡ್ಡಾಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಉಪನಿರ್ದೇಶಕರ ಕಛೇರಿ, ಜಂಟಿ ನಿರ್ದೇಶಕರ ಕಛೇರಿ ಹಾಗೂ ಆಯುಕ್ತರ ಕಛೇರಿಗಳಲ್ಲಿ ಪ್ರತ್ಯೇಕವಾಗಿ ಮಹಿಳಾ ವಿಶ್ರಾಂತಿ ಕೊಠಡಿಗಳನ್ನು ನೀಡುವಂತೆ ಸಂಘದ ವತಿಯಿಂದ ಕೋರಿಕೊಂಡ ಹಿನ್ನೆಲೆಯಲ್ಲಿ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುತ್ತಾರೆ.

ಹೆಚ್ಚಿನದಾಗಿ ಬೋಧಕೇತರ ವೃಂದದ ಹುದ್ದೆಗಳು ಖಾಲಿ ಇರುವಂತಹ ಜಿಲ್ಲೆಗಳಾದ ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ದೈನಂದಿನ ಕಛೇರಿ ಕೆಲಸಗಳನ್ನು ನಿರ್ವಹಣೆ ಮಾಡಲು ಹಾಲಿ ಇರುವ ನೌಕರರ ಮೇಲೆ ಅಧಿಕ ಒತ್ತಡವಿರುವುದರಿಂದ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡುವ ಸಂದರ್ಭದಲ್ಲಿ ಈ ಜಿಲ್ಲೆಗಳನ್ನು ಪರಿಗಣಿಸಿ ಆದ್ಯತೆಯ ಮೇರೆಗೆ ನೇಮಕಾತಿ ನೀಡುವ ಬಗ್ಗೆ ಕೋರಿಕೊಂಡ ಮನವಿಯನ್ನು ಪರಿಗಣಿಸಿ, ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಮೇಲಿನ ಜಿಲ್ಲೆಗಳಿಗೆ ಹಾಗೂ ಅತೀ ಹೆಚ್ಚು ಖಾಲಿ ಹುದ್ದೆಗಳಿರುವ ಜಿಲ್ಲೆಗಳಿಗೆ ಆದ್ಯತೆಯ ಮೇರೆಗೆ ಸ್ಥಳ ನಿಯುಕ್ತಿಗೊಳಿಸುವಂತೆ ಸೂಚಿಸಿದರು.
ವಿಭಾಗವಾರು ಕಾನೂನು ಕೋಶವನ್ನು ತೆರೆಯುವ ಮೂಲಕ ಕಾನೂನು ಸಲಹೆಗಾರರನ್ನು ನೇಮಕ ಮಾಡುವಂತೆ ಸಂಘದ ವತಿಯಿಂದ ಕೋರಿಕೊಂಡ ಹಿನ್ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಅಗತ್ಯ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿದರು.
ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಎಂಬ ಕಾರಣವನ್ನು ನೀಡಿ ಅನಗತ್ಯವಾಗಿ ನಿಯೋಜನೆ ಮಾಡುವ ಮೂಲಕ ನೌಕರರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಹಾಗೂ ದೀರ್ಘಕಾಲದವರೆಗೆ ಒಂದೇ ಕಛೇರಿಯಲ್ಲಿ ಸೇವೆ ಸಲ್ಲಿಸಿದವರು ವರ್ಗಾವಣೆಗೊಂಡಿದ್ದರೂ ಸಹ ಮತ್ತು ಕಛೇರಿಯಲ್ಲಿರುವ ಹುದ್ದೆಗಳಲ್ಲಿ ಅಗತ್ಯವಿರುವಷ್ಟು ಅಧಿಕಾರಿಗಳು/ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರೂ ಸಹ ವರ್ಗಾವಣೆಗೊಂಡಿರುವ ಅಧಿಕಾರಿ/ ಸಿಬ್ಬಂದಿಗಳನ್ನು ಪುನಃ ನಿಯೋಜನೆ ಮಾಡಿಕೊಂಡಿರುವುದನ್ನು ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದು ಅಂತಹ ನಿಯೋಜನೆಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ರದ್ದುಗೊಳಿಸುವಂತೆ ಕೋರಿಕೊಂಡ ಸಂಘದ ಮನವಿಯ ಮೇರೆಗೆ ಸ್ಪಂದಿಸಿ ಕೂಡಲೇ ಅವರನ್ನು ನಿಯೋಜಿತ ಸ್ಥಳದಿಂದ ಮೂಲ ಹುದ್ದೆಯ ಸ್ಥಳದ ಕರ್ತವ್ಯಕ್ಕೆ ಬಿಡುಗಡೆಗೊಳಿಸುವಂತೆ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮಾನ್ಯ ಆಯುಕ್ತರು ಮತ್ತು ಮಾನ್ಯ ನಿರ್ದೇಶಕರು ಆಡಳಿತರವರಿಗೆ ಸೂಚಿಸಿದರು.

ಬೋಧಕೇತರ ನೌಕರರ ಸಂಘದ ವತಿಯಿಂದ ಮಾನ್ಯ ಶಿಕ್ಷಣ ಸಚಿವರಿಗೆ ಸಲ್ಲಿಸಲಾದ ಬೇಡಿಕೆ ಮತ್ತು ಸಮಸ್ಯೆಗಳನ್ನು ಅವರ ನಿರ್ದೇಶನದ ಮೇರೆಗೆ ಸುದೀರ್ಘವಾಗಿ ಸಭೆ ನಡೆಸಿ, ಪರಿಹಾರ ಮತ್ತು ಸಲಹೆಗಳನ್ನು ನೀಡುವ ಮೂಲಕ ಅಗತ್ಯ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಮೊದಲ ಸಭೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ರವರಿಗೆ, ವಿಕಾಸ್ ಕಿಶೋರ್ ಸುರಳ್ಕರ್ , ಮಾನ್ಯ ಆಯುಕ್ತರು, ಶಾ.ಶಿ.ಇ. ಮತ್ತು ಶ್ರೀಮತಿ ವಿಜಯ ಈ ರವಿಕುಮಾರ್ , ಮಾನ್ಯ ನಿರ್ದೇಶಕರು(ಆಡಳಿತ), ಶಾ.ಶಿ.ಇ. ಇವರಿಗೆ ರಾಜ್ಯದ ಸಮಸ್ತ ಬೋಧಕೇತರ ವೃಂದದ ನೌಕರರು ಮತ್ತು ಅಧಿಕಾರಿಗಳ ಪರವಾಗಿ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು ಕೃತಜ್ಞತಾ ಪೂರ್ವಕ ಧನ್ಯವಾದಗಳನ್ನು ನವೀನ, ಎಸ್.ಆರ್.ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘ ತಿಳಿಸಿದ್ದಾರೆ.



