ಶಿವಮೊಗ್ಗ | ರಕ್ತದಾನ ಜೀವಮಾನದ ಮಹಾದಾನ : ಡಾ. ತಿಮ್ಮಪ್ಪ ಟಿ.ಡಿ. ಅಭಿಪ್ರಾಯ

ಶಿವಮೊಗ್ಗ

ಶಿವಮೊಗ್ಗ,ಜೀವಮಾನದಲ್ಲಿಯೇ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನವಾಗಿದೆ ಎಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ತಿಮ್ಮಪ್ಪ ಟಿ.ಡಿ. ಅಭಿಪ್ರಾಯಪಟ್ಟರು.

ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಾಣ ಕಾಲೇಜಿನಲ್ಲಿ ವಿವಿಧ ಘಟಕಗಳ ಸಹಯೋಗದೊಂದಿಗೆ ಇಂದು ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ರಕ್ತದಾನದಿಂದ ಮತ್ತೊಂದು ಜೀವ ಉಳಿಯುತ್ತದೆ. ಇದೊಂದು ಪುಣ್ಯ ಕಾರ್ಯವಾಗಿದ್ದು ರಕ್ತದಾನಿಗಳಿಗೆ ಆತ್ಮತೃಪ್ತಿಯನ್ನು ತಂದುಕೊಡುತ್ತದೆ. ಒಬ್ಬ ವ್ಯಕ್ತಿ ಮಾಡುವ ರಕ್ತದಾನ ಅನೇಕ ವ್ಯಕ್ತಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡುತ್ತದೆ.

ರಕ್ತದಾನದ ಕುರಿತು ಇಂದು ಸಾಕಷ್ಟು ಜಾಗೃತಿ ಮೂಡಿದ್ದು ರಕ್ತದಾನಿಗಳ ಸಂಖ್ಯೆ ಹೆಚ್ಚು ಆಗುತ್ತಿರುವುದು ಸಂತೋಷದಾಯಕವಾದ ಸಂಗತಿ ಆಗಿದೆ ಎಂದು ಅಭಿಪ್ರಾಯಪಟ್ಟರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಟಿ. ಅವಿನಾಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದು ಜಗತ್ತಿನಲ್ಲಿ ರಕ್ತ ಚೆಲ್ಲುವ ರಕ್ತ ಬಯಸುವ ವಿದ್ಯಮಾನಗಳು ನಡೆಯುತ್ತಿವೆ. ಎಲ್ಲೆಲ್ಲೂ ಹಿಂಸೆ ತಾಂಡವವಾಡುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು ರಕ್ತದಾನ ಮಾಡುತ್ತಿರುವುದು ಸಮಾಜಕ್ಕೆ ಶುಭ ಸಂದೇಶವನ್ನು ನೀಡುವ ಸಂಗತಿಯಾಗಿದೆ.

ರಕ್ತದಾನಿಗಳು ಆತ್ಮವಿಶ್ವಾಸದಿಂದ ರಕ್ತದಾನ ಮಾಡುವುದರ ಮೂಲಕ ಸಮಾಜ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

106ನೇ ಬಾರಿ ರಕ್ತದಾನ ಮಾಡಿದ ಅಧ್ಯಾಪಕರಾದ ಗಿರೀಶ್ ಕಾರಂತ್.

ಕಾರ್ಯಕ್ರಮದಲ್ಲಿ ಮೆಗ್ಗಾನ್ ಆಸ್ಪತ್ರೆಯ ನರ್ಸಿಂಗ್ ಮೇಲ್ವಿಚಾರಕರಾದ ಶೇಷಮ್ಮ, ಎಚ್ ಡಿ ಎಫ್ ಸಿ ಬ್ಯಾಂಕಿನ ಕ್ಲಸ್ಟರ್ ಹೆಡ್ ಶಿವಾನಂದ ಮೂಡ್ವಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಗಿರಿಧರ್ ಕೆ.ವಿ., ಯುವರ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ಬಾಲಸ್ವಾಮಿ, ಎನ್‌ಸಿಸಿ ಅಧಿಕಾರಿ ಡಾ. ಶಶಿರಾಜ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಪ್ರಕಾಶ್ ಮರ್ಗನಳ್ಳಿ, ರೋವರ್ಸ್ ಸಂಚಾಲಕರಾದ ಡಾ. ಶಿವಕುಮಾರ್, ರೇಂಜರ್ಸ್ ಸಂಚಾಲಕರಾದ ಶ್ರೀಮತಿ ಮಮತಾ ಉಪಸ್ಥಿತರಿದ್ದರು.

Author