ದಾವಣಗೆರೆ, ಹೊನ್ನಾಳಿ, ‘ವ್ಯಾಪಾರಕ್ಕೆ, ಉದ್ಯೋಗಕ್ಕೆ ನೀಡುವ ಆದ್ಯತೆಯನ್ನು ನಾವು ಕೃಷಿಗೆ ನೀಡುತ್ತಿಲ್ಲ. ಈ ಪ್ರವೃತ್ತಿಯು ಕೃಷಿ ಕ್ಷೇತ್ರ ಹಿಂದುಳಿಯಲು ಕಾರಣವಾಗಿದೆ’ ಎಂದು ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಲಿಂ. ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳ 56ನೇ ಪುಣ್ಯಾರಾಧನೆ, ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 11ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕೃಷಿಮೇಳದ ಸಾನ್ನಿಧ್ಯ ವಹಿಸಿ ಶುಕ್ರವಾರ ಮಾತನಾಡಿದರು.
‘ಪೂರ್ವಜರ ಕಾಲದಲ್ಲಿ ಕೃಷಿಯು ಉನ್ನತ ಸ್ಥಾನ ಪಡೆದಿತ್ತು. ವ್ಯಾಪಾರ ಮಧ್ಯಮ, ನೌಕರಿ ಕೊನೆಯ ಸ್ಥಾನ ಪಡೆದಿದ್ದವು. ಆದರೀಗ ವ್ಯಾಪಾರ, ಉದ್ಯೋಗ ಮೊದಲೆರಡು ಸ್ಥಾನ ಪಡೆದು ಕೃಷಿಯನ್ನು ಕೊನೆಯ ಸ್ಥಾನಕ್ಕೆ ತಳ್ಳಿವೆ’ ಎಂದು ಹೇಳಿದರು.
‘ರೈತರ ಬದುಕು ಅತಂತ್ರವಾಗಿದೆ. ಅವರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ರಾಜ್ಯಮಟ್ಟದ ಕೃಷಿಮೇಳ ಆಯೋಜನೆ ಮಾಡಿದ್ದು, ಕೃಷಿಗೆ ಸಂಬಂಧಿಸಿದ ಹೊಸ ಹೊಸ ವಿಷಯಗಳ ಚರ್ಚೆ, ಆವಿಷ್ಕಾರಗಳನ್ನು ಪರಿಚಯ ಮಾಡಿಕೊಡುವ ಉದ್ದೇಶವಿದೆ.
ಕಡಿಮೆ ಸಮಯದಲ್ಲಿ ಎಲ್ಲರ ಸಹಕಾರದಿಂದ ಮೇಳ ಆಯೋಜಿಸಲಾಗಿದೆ’ ಎಂದು ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
‘ಹಿರೇಕಲ್ಮಠದ ಸ್ವಾಮೀಜಿ ರೈತರ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ ಕೃಷಿಮೇಳ ನಡೆಸಲು ಮುಂದಾಗಿರುವುದು ಇಡೀ ದೇಶಕ್ಕೆಮಾದರಿ’ ಎಂದು ಶಾಸಕ ಡಿ.ಜಿ. ಶಾಂತನಗೌಡ ಅಭಿಪ್ರಾಯಪಟ್ಟರು.
‘ಹಾಲಿನ ದರ ನಿಗದಿ ಮಾಡಿದಂತೆ ಇತರೆ ಬೆಳೆಗಳಿಗೂ ದರ ನಿಗದಿ ಮಾಡುವ ಹಾಗೂ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ಮುಖ್ಯಮಂತ್ರಿ ಜತೆ ಚರ್ಚೆ ಮಾಡುತ್ತೇವೆ’ ಎಂದು ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ತಿಳಿಸಿದರು.
ರಟ್ಟೆಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಂಪುರ ಮಠದ ಶಿವಕುಮಾರ ಹಾಲಸ್ವಾಮೀಜಿ, ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಪ್ರಭು ಸಾರಂಗ ದೇಶಿಕೇಂದ್ರಶಿವಾಚಾರ್ಯ ಸ್ವಾಮೀಜಿ, ಬಯಲುಸೀಮೆ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಮಾಜಿ ಶಾಸಕ ವೈ.ಸಂಪಂಗಿ, ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿದರುಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,
ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಕುರುಬ ಸಮಾಜದ ಮುಖಂಡ ಎಚ್.ಎ. ಉಮಾಪತಿ, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಮಧುಗೌಡ್ರ, ಅರಕೆರಿ ದಿಡಗೂರು ಪಾಲಾಕ್ಷಪ್ಪ, ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಪಟ್ಟಣಶೆಟ್ಟಿ, ಮಾಜಿ ಸೈನಿಕ ಎಂ. ವಾಸಪ್ಪ, ಜಂಗಮ ಸಮಾಜದ ಅಧ್ಯಕ್ಷ ಪಂಚಾಕ್ಷರಿ, ರೈತ ಸಂಘದ ಅಧ್ಯಕ್ಷ ಬಸಪ್ಪ ಅರಬಗಟ್ಟೆ ಭಾಗವಹಿಸಿದ್ದರು.
ಕಾಶಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ
ಹೊನ್ನಾಳಿ, ಪಟ್ಟಣದ ಹಿರೇಕಲ್ಮಠದಲ್ಲಿ ಲಿಂ. ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಲಿಂ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಕಾಶಿಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ಶುಕ್ರವಾರ ನಡೆಯಿತು.ಪುರಪ್ರವೇಶ ಮಾಡಿದ ಸ್ವಾಮೀಜಿ ಅವರಿಗೆ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು.
ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಿ.ಜಿ. ಶಾಂತನಗೌಡ ಸೇರಿದಂತೆ ನೂರಾರು ಜನರು ಸ್ವಾಮೀಜಿಯನ್ನು ಬರಮಾಡಿಕೊಂಡರು. ನಂತರ ಪಟ್ಟಣದಲ್ಲಿ ಸ್ವಾಮೀಜಿಯ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು.
ಮಾರ್ಗ-ದುದ್ದಕ್ಕೂ ಮನೆಗಳ ಮುಂದೆ ರಂಗೋಲಿ ಬಿಡಿಸಿ, ತೋರಣ ಕಟ್ಟಿ ಶೃಂಗರಿಸಲಾಗಿತ್ತು. ಹಿರೇಕಲ್ಮಠದ ಅನೆ ಸುಭದ್ರೆ, ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು.
ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಮತ್ತು ಕುರುಬ ಸಮಾಜದ ಮುಖಂಡರಾದ ಎಚ್.ಎ. ಉಮಾಪತಿ, ಹೊಸಕೇರಿ ಸುರೇಶ್, ಕತ್ತಿಗೆ ನಾಗರಾಜ್, ಪುರಸಭಾ ಮಾಜಿ ಸದಸ್ಯ ಹೊಸಕೇರಿ ಸುರೇಶ್, ಕುಮಾರಸ್ವಾಮಿ, ಬಿಸಾಟಿ ಸುರೇಶ್, ಸರಳಿಮನೆ ಮಂಜಪ್ಪ, ಬೆನಕನಹಳ್ಳಿ ವೀರಣ್ಣ, ಪ್ರೇಮಕುಮಾರ್ ಬಂಡಿಗಡಿ, ಎಚ್.ಬಿ.ಮೋಹನ್, ಅನ್ನದಾನಯ್ಯ ಶಾಸ್ತ್ರಿ, ಬೆನಕಯ್ಯ ಶಾಸ್ತ್ರಿ ಸೇರಿದಂತೆ ಅಪಾರ ಜನರು ಭಾಗವಹಿಸಿದ್ದರು.



