ಆಂಧ್ರಪ್ರದೇಶ, ನರಸರಾವ್‌ಪೇಟೆಯ ಖಾಸಗಿ ಆಸ್ಪತ್ರೆಯ ವೈದ್ಯರು ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸಿ ಐದು ವರ್ಷದ ಬಾಲಕನ ಕರುಳಿನಿಂದ ಸೇಫ್ಟಿ ಪಿನ್ ಅನ್ನು ಯಶಸ್ವಿಯಾಗಿ ಹೊರತೆಗೆದು, ಬಾಲಕನ ಜೀವ ಉಳಿಸಿರುವ ಘಟನೆ ನಡೆದಿದೆ.
ಆಕಸ್ಮಿಕವಾಗಿ ಸೇಫ್ಟಿ ಪಿನ್ ನುಂಗಿದ ಬಾಲಕ:
ರೆಹಾನ್ಸ್ (5) ಎಂಬ ಬಾಲಕ ಸೋಮವಾರ ಬೆಳಗ್ಗೆ ಮನೆಯಲ್ಲಿ ಆಟವಾಡುತ್ತಿದ್ದಾಗ ಸೇಫ್ಟಿ ಪಿನ್ ಅನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾನೆ. ಅದು ಆಕಸ್ಮಿಕವಾಗಿ ಗಂಟಲಿನಿಂದ ಜಾರಿ ಅವನ ಹೊಟ್ಟೆಗೆ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಪಿನ್ ಹೊರ ತೆಗೆದ ವೈದ್ಯರು:
ಪರಿಸ್ಥಿತಿಯ ಗಂಭೀರತೆ ಅರಿತ ಬಾಲಕನ ಪೋಷಕರು ತಕ್ಷಣ ಅವನನ್ನು ನರಸರಾವ್‌ಪೇಟೆಯ ಯಶ್ವರ್ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಮಗುವನ್ನು ದಾಖಲಿಸಿಕೊಂಡ ವೈದ್ಯರು, ಸೂಕ್ತ ತಪಾಸಣೆ ನಡೆಸಿ, ಆ ಬಳಿಕ ಮಗುವಿಗೆ ಚಿಕಿತ್ಸೆ ನೀಡಿದ ಡಾ. ನಿಖಿಲೇಶ್ ಯಂಡಮೂರಿ ಅವರು, ಬಾಲಕನ ಹೊಟ್ಟೆ ಭಾಗದ ಎಕ್ಸ್-ರೇ ಪರೀಕ್ಷೆ ಮಾಡಿಸಿದ್ದರು.
ಸ್ಕ್ಯಾನ್‌ನಲ್ಲಿ ಆ ವಸ್ತು ಕರುಳಿನೊಳಗೆ ಸಿಲುಕಿಕೊಂಡಿರುವುದು ಕಂಡುಬಂದಿತ್ತು. ಇದರಲ್ಲಿನ ಅಪಾಯಗಳನ್ನು ಪರಿಗಣಿಸಿ, ವೈದ್ಯಕೀಯ ತಂಡವು ಸುಧಾರಿತ ಎಂಡೋಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಹೊಟ್ಟೆಯೊಳಗೆ ಸೇರ್ಪಡೆಗೊಂಡಿದ್ದ ಸೇಫ್ಟಿಪಿನ್ ಅನ್ನು ತೆಗೆದುಹಾಕುವ ನಿರ್ಧಾರಕ್ಕೆ ಬಂದಿತ್ತು.



