ತುಮಕೂರು | 18 ಲಕ್ಷ ರೂಪಾಯಿವರೆಗೂ ಎತ್ತಿನ ಜೋಡಿ ಮಾರಾಟ

ತುಮಕೂರು

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಪ್ರತಿವರ್ಷ ನಡೆಯುವ ದನಗಳ ಜಾತ್ರೆ ಈ ಬಾರಿ ಸಾಕಷ್ಟು ಗಮನ ಸೆಳೆಯುತ್ತಿದೆ. ಜಾತ್ರೆಯಲ್ಲಿ ‘ಹಳ್ಳಿಕಾರ್​​​​’ ತಳಿಯ ಹೋರಿಗಳು ನಾಲ್ಕು ಲಕ್ಷ ರೂಪಾಯಿಂದ 18 ಲಕ್ಷ ರೂಪಾಯಿವರೆಗೂ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.

ಸಿದ್ದಗಂಗಾ ಜಾನುವಾರುಗಳ ಜಾತ್ರೆಗೆ ಸಾವಿರಾರು ಹೋರಿಗಳನ್ನು ರೈತರು ತಂದಿದ್ದಾರೆ. ತುಮಕೂರು, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ. ಚಿತ್ರದುರ್ಗ ಜಿಲ್ಲೆಗಳ ರೈತರು ಹಳ್ಳಿಕಾರ್​ ತಳಿಯ ಹೋರಿಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದರೆ, ವಿವಿಧ ಕಡೆಗಳಿಂದ ರೈತರು ಕೂಡ ಅವುಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ.

ರೈತ ಮಧು ಎಂಬುವರು ಈ ಕುರಿತು ಮಾತನಾಡಿ, “ಈ ಭಾಗದಲ್ಲಿ ಹಳ್ಳಿಕಾರ್ ತಳಿಯ ಹೋರಿಗಳನ್ನು ರೈತರು ಬಳಸುತ್ತಾರೆ. ನೆಲಮಂಗಲ, ತುಮಕೂರಿನಲ್ಲಿ ನಮ್ಮ ಹಳ್ಳಿಕಾರ್ ತಳಿಯೇ ಪ್ರಸಿದ್ಧ. ಹೀಗಾಗಿ ಅನೇಕ ವರ್ಷಗಳಿಂದ ನಾವು ಇವುಗಳನ್ನು ಸಾಕಿ ಸಿದ್ದಗಂಗಾ ಜಾತ್ರೆಗೆ ತರುತ್ತೇವೆ.

ಈ ಬಾರಿ 8 ಜೊತೆ ಹಳ್ಳಿಕಾರ್ ಹೋರಿಗಳನ್ನು ತೆಗೆದುಕೊಂಡು ಬಂದಿದ್ದೇವೆ. ಮೂರುವರೆ ಲಕ್ಷ ರೂ. ಮೌಲ್ಯದ ಹೋರಿಗಳು ಸೇರಿದಂತೆ ಸುಮಾರು 18 ಲಕ್ಷ ರೂ.ಗಳವರೆಗಿನ ಹೋರಿಗಳನ್ನು ಕೂಡ ನಾವು ಸಾಕುತ್ತಿದ್ದೇವೆ.

ಹೋರಿಗಳನ್ನು ಅವುಗಳ ಹಲ್ಲುಗಳು ಇರುವ ಮಾನದಂಡ ಹಾಗೂ ಅವುಗಳ ಆರೋಗ್ಯಪೂರ್ಣ ಮೈಕಟ್ಟಿನಿಂದ ದರ ನಿಗದಿಪಡಿಸಲಾಗುತ್ತದೆ. ಕಳೆದ ವರ್ಷ 15 ಲಕ್ಷ ರೂ.ಗಳಿಗೆ ಹಳ್ಳಿಕಾರ್​​ ತಳಿಗಳ ಹೋರಿಗಳನ್ನು ಮಾರಾಟ ಮಾಡಿದ್ದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಮೌಲ್ಯದ ಹೋರಿಗಳು ಎಂದು ಪರಿಗಣಿಸಲಾಗಿತ್ತು.

ಪ್ರಸ್ತುತ ದಿನಮಾನಗಳಲ್ಲಿ ಹಳ್ಳಿಕಾರ್​ ತಳಿ ಹೋರಿಗಳ ಸಾಕಾಣಿಕೆ ಕ್ಷೀಣಿಸುತ್ತಿದೆ. ಆದರೆ ಇನ್ನೊಂದೆಡೆ ಅವುಗಳ ಬೇಡಿಕೆ ಹೆಚ್ಚಾಗುತ್ತಿರುವುದು ಗಮನಾರ್ಹ ಅಂಶವಾಗಿದೆ”

Author