ಬೆಂಗಳೂರು | ಮನೆಯಲ್ಲಿ ಬೈದ್ರು ಅಂತ KSRTC ಉಚಿತ ಬಸ್ ಹತ್ತಿಕೊಂಡು ಭದ್ರಾವತಿಗೆ ಬಂದ ಮಕ್ಕಳ ರಕ್ಷಿಸಿದ ಪೊಲೀಸರು

ಬೆಂಗಳೂರು

ಶಿವಮೊಗ್ಗ,13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ಕಿರಿಯ ಸಹೋದರನೊಂದಿಗೆ ಮನೆಬಿಟ್ಟು ಕೆಂಪೇಗೌಡ ಬಸ್​ನಿಲ್ದಾಣದಲ್ಲಿ ಸಾರಿಗೆ ಬಸ್ ಹತ್ತಿಕೊಂಡು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಬಂದಿದ್ದಾಳೆ.

ನಿರಂತರ ಟ್ರೇಸಿಂಗ್ ಮೂಲಕ ಇವರಿಬ್ಬರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.. ಬೆಂಗಳೂರಿನ ಎಚ್‌ಎಎಲ್ ಪೊಲೀಸ್ ಠಾಣೆ ಲಿಮಿಟ್ಸ್​ನ ಘಟನೆ ಇದಾಗಿದೆ.

ಮನೆಯಲ್ಲಿ ಬೈದರು ಎನ್ನುವ ಕಾರಣಕ್ಕೆ ಮನೆಯಿಂದ ಆಧಾರ್​ ಕಾರ್ಡ್​ ತಗೊಂಡು ಹೊರಟ ಇಬ್ಬರು ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ.

ಶಕ್ತಿ ಯೋಜನೆಯ ಅಡಿಯಲ್ಲಿ ಆಧಾರ್ ಕಾರ್ಡ್ ತೋರಿಸಿ ತನಗೆ ಉಚಿತ ಟಿಕೆಟ್ ಮಾಡಿಸಿಕೊಂಡ ಬಾಲಕಿ, ತಮ್ಮನಿಗೆ ಉಚಿತ ಪ್ರಯಾಣದ ಟಿಕೆಟ್ ಮಾಡಿಸಿದ್ದಳು. ತಮ್ಮನ ಜೊತೆಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಪ್ರಯಾಣ ಬೆಳೆಸಿದ್ದಳು.

ಈ ಮಧ್ಯೆ ಪೋಷಕರು ಮಕ್ಕಳು ಕಾಣದೇ ಪೊಲೀಸರ ಮೊರೆ ಹೋಗಿದ್ದರು. ಇನ್ನೂ ಪೊಲೀಸರು ಸಹ ತಡಮಾಡದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಕ್ಕಳು ಬ್ಯಾಗ್ ಹಿಡಿದುಕೊಂಡು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೋಗಿರುವುದು ಕಾಣಿಸಿದೆ.

ಬಸ್​ನಿಲ್ದಾಣದ ದೃಶ್ಯಗಳನ್ನ ಪರಿಶೀಲಿಸಿದ ಅವರಿಗೆ ಇಬ್ಬರು ಮಕ್ಕಳು ಶಿವಮೊಗ್ಗದ ಬಸ್ ಹತ್ತಿರುವುದು ಗೊತ್ತಾಗಿತ್ತು. ಬಸ್​ ನಂಬರ್​ ಪಡೆದು ಸಾರಿಗೆ ಇಲಾಖೆಯ ಸಹಾಯದೊಂದಿಗೆ ಪೊಲೀಸರು ಅಲರ್ಟ್ ಆಗಿ ಎಲ್ಲಾ ಸ್ಟೇಷನ್​ಗೆ ಮಾಹಿತಿ ನೀಡಿದ್ರು.

ಈ ಮಧ್ಯೆ ಭದ್ರಾವತಿಯಲ್ಲಿ ಮಕ್ಕಳನ್ನು ಗಮನಿಸಿದ ಸಾರ್ವಜನಿಕರು, ಬಸ್​ನಲ್ಲಿದ್ದ ಮಕ್ಕಳನ್ನ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬೆಂಗಳೂರು ಪೊಲೀಸರು ಮಕ್ಕಳನ್ನ ರಕ್ಷಣೆ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಮಕ್ಕಳಿಗೆ ಕೌನ್ಸಿಲಿಂಗ್ ನಡೆಸಿ ಪೋಷಕರ ಸುಪರ್ಧಿಗೆ ಒಪ್ಪಿಸಲಾಗಿದೆ.

Author