ಒಂದೇ ಸಾಲು, ಎರಡೇ ಮಾತು ; ಭಾಷಣ ಅರ್ಧಕ್ಕೇ ಮೊಟಕುಗೊಳಿಸಿ ಸದನ ಬಿಟ್ಟು ನಿರ್ಗಮಿಸಿದ ರಾಜ್ಯಪಾಲರು

ಬೆಂಗಳೂರು

ಇಂದಿನಿಂದ ರಾಜ್ಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಅಧಿವೇಶನದಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರು ಕೇವಲ ಎರಡೇ ನಿಮಿಷ ಮಾತ್ರವೇ ಭಾಷಣ ಮಾಡಿ ಹೊರನಡೆದಿದ್ದಾರೆ. ರಾಜ್ಯಪಾಲರ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಭಾಷಣ ಮಾಡಿದ ರಾಜ್ಯಪಾಲರು, “ನನ್ನ ಸರ್ಕಾರವು ರಾಜ್ಯದ ಅರ್ಥಿಕ, ಸಾಮಾಜಿಕ, ಭೌತಿಕ ಅಭಿವೃದ್ಧಿಯನ್ನು ದ್ವಿಗುಣ ಮಾಡಲು ಬದ್ಧವಾಗಿದೆ. ಜೈ ಹಿಂದ್, ಜೈ ಕರ್ನಾಟಕ” ಎಂದಷ್ಟೇ ಹೇಳಿ, ಭಾಷಣ ಮುಗಿಸಿದ್ದಾರೆ.

ರಾಜ್ಯಪಾಲರು ಭಾಷಣ ಪೀಠದಿಂದ ಕೆಳಗಿಳಿದು ಬಂದಾಗ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ನೇತೃತ್ವದಲ್ಲಿ ಕಾಂಗ್ರೆಸ್‌ ಶಾಸಕರು ರಾಜ್ಯಪಾಲರಿಗೆ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರನ್ನು ಅಡ್ಡಗಟ್ಟಿ ಭಾಷಣ ಓದುವಂತೆ ಕೇಳಿಕೊಂಡರು.ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದರು.

ಈ ಬಗ್ಗೆ ಸರ್ಕಾರದ ಸಚಿವರು ಕಿಡಿ ಕಾರಿದ್ದರು. ಸರ್ಕಾರ ಬರೆದುಕೊಟ್ಟ ಭಾಷಣ ಬದಲು ಇಂದು ಅವರೇ ಭಾಷಣ ಬರೆದುಕೊಂಡು ಬಂದು ಓದುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅದನ್ನು ಕೂಡ ಓದದೆ ಇಂದು ರಾಜ್ಯಪಾಲರು ನಿರ್ಗಮಿಸಿದ್ದಾರೆ.ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ವಿಧಾನಸಭೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.

Author