ಶಿವಮೊಗ್ಗ | ಭಗವದ್ಗೀತೆ ಟೀಕಿಸುವ ಸಿದ್ದರಾಮಯ್ಯ, ಮಹಾತ್ಮ ಗಾಂಧಿಯನ್ನು‌ ಮನುವಾದಿ ಎನ್ನುವರೇ, ಈಶ್ವರಪ್ಪ ಪ್ರಶ್ನೆ?

ಶಿವಮೊಗ್ಗ

ಶಿವಮೊಗ್ಗ, ಮಹಾತ್ಮ ಗಾಂಧಿಯವರ ಜೀವನದಲ್ಲೇ ಗೀತ ಸ್ಫೂರ್ತಿಯಾಗಿರುವಾಗ ಇದನ್ನು ಅಧ್ಯಯನ ಮಾಡುವವರು ಮನುವಾದಿಗಳು ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾತ್ಮ ಗಾಂಧಿಯವರನ್ನೂ ಸಹಾ ಮನುವಾದಿಗಳು ಎಂದು ಕರೆಯುತ್ತಾರೆಯೇ ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದು ಸಿದ್ದರಾಮಯ್ಯನವರ ಸೈದ್ಧಾಂತಿಕ ದಿವಾಳಿತನ, ಯಾರೋ ಹೇಳಿಕೊಟ್ಟಿದ್ದನ್ನು ಹೇಳುವ ಕಮ್ಯುನಿಸ್ಟ್ ಸಿದ್ಧಾಂತವನ್ನು ತಲೆಯಲ್ಲಿ ತುಂಬಿಕೊಂಡಿರುವ ಇವರು ಭಗವದ್ಗೀತೆಯನ್ನೊಮ್ಮೆ ಅಧ್ಯಯನ ಮಾಡಲಿ ಎಂದರು.

ಭಗವದ್ಗೀತೆ ಸರ್ವ ತತ್ವಗಳ ಸಂಗಮ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗಗಳ ಮೂಲಕ ಆತ್ಮಸಾಕ್ಷಾತ್ಕಾರವನ್ನು ಹೊಂದುವ ಹಾಗೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿಭಾಯಿಸುವುದು ಗೀತೆಯ ಮೂಲ ಸಂದೇಶ, ಸರ್ವಕಾಲಕ್ಕೂ ಮೌಲ್ಯಾಧಾರಿತ ಆದರ್ಶಗಳನ್ನು ಒಳಗೊಂಡಿರುವ ಗೀತೆ, ವಿಶ್ವದಾದ್ಯಂತ ಸ್ವೀಕರಿಸಲ್ಪಟ್ಟ ಜ್ಞಾನ ಬಂಡಾರ, ಸನಾತನ ಹಿಂದೂ ಧರ್ಮದ “ವಸುದೈವ ಕುಟುಂಬಕಂ” ಎಂಬ ಸಾರ್ವತ್ರಿಕ ಆದರ್ಶವನ್ನು ಸಾರುವ ಮತ್ತು ನಿಷ್ಠಾಮ ಕರ್ಮ, ಪ್ರಾಮಾಣಿಕತೆಯೊಂದಿಗೆ ಪ್ರತಿಯೊಬ್ಬರ ಕರ್ತವ್ಯವನ್ನು, ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರುತ್ತಿದೆ ಎಂದರು.

ಮಹಾಭಾರತದ ಯುದ್ಧ ಭೂಮಿಯಲ್ಲಿ ವಿಚಲಿತನಾಗಿ ಕುಳಿತ ಅರ್ಜುನನಿಗೆ ಶ್ರೀ ಕೃಷ್ಣ ಭೋದಿಸಿದ ಗೀತೆ ಮಹಾತ್ಮ ಗಾಂಧಿಯವರನ್ನೊಳಗೊಂಡು ವಿಶ್ವದ ಹಲವು ಮಹಾನ್ ನಾಯಕರುಗಳಿಗೆ ಜೀವನ ಸ್ಪೂರ್ತಿಯಾಗಿದೆ ಎಂದರು.

ಈ ನಿಟ್ಟಿನಲ್ಲಿ ರಾಷ್ಟ್ರದ ಮಕ್ಕಳಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಭಗವದ್ಗೀತೆಯನ್ನು ಶಾಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಲು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರಿಗೆ ಪತ್ರ ಬರೆದಿರುವುದು ಒಂದು ಮಹತ್ತರ ನಡೆಯಾಗಿದೆ.

ಧರ್ಮೇಂದ್ರ ಪ್ರಧಾನ್ ಅವರೂ ಸಹಾ ಕುಮಾರಸ್ವಾಮಿಯವರ ಪತ್ರವನ್ನು ಸಕಾರತ್ಮಕವಾಗಿ ಪರಿಗಣಿಸಿದ್ದು ಸಂತಸ ತಂದಿದೆ ಎಂದರು.

ಮುಂದಿನ ದಿನಗಳಲ್ಲಿ ಭಗವದ್ಗೀತೆಯು ಪಠ್ಯ ಪುಸ್ತಕದಲ್ಲಿ ಅಧ್ಯಯನದ ವಿಷಯವಾಗಿ ಬೋಧಿಸಲ್ಪಟ್ಟು ಸನ್ಮಾರ್ಗದ ಮಹಾಸಾರ ತುಂಬಿದ ಆದರ್ಶ ಪ್ರಜೆಗಳ ಸೇವೆ ತಾಯಿ ಭಾರತಾಂಬೆಗೆ ಲಭಿಸಲೆಂದು ಹಾರೈಸಿದರು.

Author