ಶಿವಮೊಗ್ಗ | ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಾರ್ಡ್ ಸಭೆ

ಶಿವಮೊಗ್ಗ

ಶಿವಮೊಗ್ಗ ತಾಲ್ಲೂಕಿನ ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಾರ್ಡ್ ಸಭೆ ಇಂದು ಅದ್ದೂರಿಯಾಗಿ ನಡೆಯಿತು.

ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಯ ಅಗತ್ಯಗಳನ್ನು ಸ್ಪಷ್ಟವಾಗಿ ಮಂಡಿಸಿದರು.

ಶಾಲೆಯಲ್ಲಿ 105 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಿಕ್ಷಕರು ಕೇವಲ 5 ಮಂದಿ ಇರುವುದರಿಂದ ಇನ್ನೊಬ್ಬ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಶಾಲೆಯ ಶೌಚಾಲಯ ಕಾಮಗಾರಿ ನಿರ್ಮಾಣ ಹಂತದಲ್ಲಿದ್ದು, ಅದನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಬೇಡಿಕೆ ವ್ಯಕ್ತಪಡಿಸಿದರು.

ಮಕ್ಕಳಿಗೆ ಆಟದ ಮೈದಾನವಿಲ್ಲದ ಕಾರಣ, ಆಟದ ಮೈದಾನದ ವ್ಯವಸ್ಥೆ ಮಾಡಿಕೊಡಬೇಕು ಎಂದು ವಿನಂತಿಸಿದರು.

ಮಳೆಗಾಲದಲ್ಲಿ ಊಟ ಮಾಡಲು ದೊಡ್ಡ ತೊಂದರೆ ಎದುರಾಗುತ್ತಿರುವುದರಿಂದ ಊಟದ ಹಾಲ್ ನಿರ್ಮಿಸಿ ನೀಡುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.

ಮಕ್ಕಳು ತಮ್ಮ ಅಗತ್ಯಗಳನ್ನು ಹಿಂಜರಿಯದೆ ಧೈರ್ಯವಾಗಿ ಅಧಿಕಾರಿಗಳ ಮುಂದೆ ಮಂಡಿಸಿದ ರೀತಿಗೆ ಅತಿಥಿಗಳು ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇಡಿಕೆಗಳನ್ನು ಆದ್ಯತೆಯಂತೆ ಪರಿಗಣಿಸುವುದಾಗಿ ಭರವಸೆ ನೀಡಿದರು.

ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ವಾರ್ಡ್ ಸಭೆ ಮಕ್ಕಳು ತಮ್ಮ ಹಕ್ಕುಗಳು ಹಾಗೂ ಶಾಲಾ ಅಭಿವೃದ್ಧಿ ಬಗ್ಗೆ ಜಾಗೃತರಾಗುತ್ತಿರುವುದಕ್ಕೆ ಮತ್ತೊಂದು ಉದಾಹರಣೆಯಾಯಿತು.

ಸಭೆಯ ಅಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿನಿ ಹೇಮಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಸದಸ್ಯ ಕುಮಾರಪ್ಪ, ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯ ಬಿ.ಆರ್. ವಾಗೀಶ್, ಗ್ರಾಮದ ಮುಖಂಡ ಮೈಲಾರಪ್ಪ ಶಿಕ್ಷಕಿಯರಾದ ದೀಪಾ, ವನಿತಾ, ವಿನುತ ಉಪಸ್ಥಿತರಿದ್ದರು.

ಕಾರ್ಯಕ್ರಮವು ವಿದ್ಯಾರ್ಥಿನಿ ಯಶಸ್ವಿನಿ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮುಖ್ಯ ಶಿಕ್ಷಕ ರಮೇಶ ಪಿ.ಕೆ. ಅವರು ಅತಿಥಿಗಳನ್ನು ಸ್ವಾಗತಿಸಿದರು. ನಿರೂಪಣೆಯನ್ನು ಕೃಷ್ಣಮೂರ್ತಿ ನಿರ್ವಹಿಸಿದರು ಮತ್ತು ಕೊನೆಯಲ್ಲಿ ಪಂಚಾಯಿತಿ ಕಾರ್ಯದರ್ಶಿ ಲಕ್ಷ್ಮಣಪ್ಪ ವಂದನೆ ಸಲ್ಲಿಸಿದರು.

Author