ಶಿವಮೊಗ್ಗ | ಸಿದ್ದರಾಮಯ್ಯನವರೇ ಕ್ಷಮೆ ಕೇಳಿ ; ಬಿಜೆಪಿ ಮಹಿಳಾ ಮೋರ್ಚಾ ಆಗ್ರಹ

ಶಿವಮೊಗ್ಗ

ಶಿವಮೊಗ್ಗ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಸಾರ್ವಜನಿಕವಾಗಿ ನೀಡಿರುವ ಅತ್ಯಂತ ಅಸಂಸ್ಕೃತ ಮತ್ತು ಮಹಿಳಾ ವಿರೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು, ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಶಿವಮೊಗ್ಗ ನಗರ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ ನಡೆಸಿತು.

ಈ ಕುರಿತು ಮಾತನಾಡಿ ಮನವಿ ಸಲ್ಲಿಸಿದ ಮಹಿಳಾ ಮೋರ್ಚಾ ಈ ಕೆಳಕಂಡ ವಿಷಯ ತಿಳಿಸಿದ್ದಾರೆ. ರಾಜಕೀಯ ಘನತೆಗೆ ಅಪಮಾನ ಮಾಡಿ ಕೇಂದ್ರ ಸಚಿವ ಸಂಪುಟದಲ್ಲಿ ಒಬ್ಬ ಪ್ರಭಾವಿ ಹುದ್ದೆಯನ್ನು ಅಲಂಕರಿಸಿರುವ, ದೇಶದ ಹಣಕಾಸು ನೀತಿಗಳನ್ನು ನಿರ್ಧರಿಸುವ ಪ್ರಮುಖ ಮಹಿಳಾ ನಾಯಕಿಯನ್ನು ಮುಖ್ಯಮಂತ್ರಿಗಳು ಪದೇ ಪದೇ ಏಕವಚನದಲ್ಲಿ ಮತ್ತು ಹಗುರವಾಗಿ ಸಂಬೋಧಿಸಿರುವುದು ಸಂಸದೀಯ ಮೌಲ್ಯಗಳಿಗೆ ಮತ್ತು ಮಹಿಳೆಯರ ಘನತೆಗೆ ಮಾಡಿದ ನೇರ ಅಪಮಾನವಾಗಿದೆ ಎಂದು ಆರೋಪಿಸಿದೆ.

ಕರ್ನಾಟಕದ ಸಂಸ್ಕೃತಿಯಲ್ಲಿ ಹಿರಿಯರಿಗೆ, ಅದರಲ್ಲೂ ಮಹಿಳಾ ನಾಯಕರಿಗೆ ಗೌರವ ಕೊಡುವುದು ಸಂಪ್ರದಾಯವಾಗಿದೆ. ಸಿದ್ದರಾಮಯ್ಯ ಅವರ ಈ ಹೇಳಿಕೆಯು ಕನ್ನಡಿಗರ ಸಂಸ್ಕೃತಿಯನ್ನು ಪ್ರತಿನಿಧಿಸುವುದಿಲ್ಲ.

ಒಬ್ಬ ಮುಖ್ಯಮಂತ್ರಿಯಾಗಿ ಅವರು ಬಳಸಿದ ಭಾಷೆ ಅತ್ಯಂತ ಕೀಳುಮಟ್ಟದ್ದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಿಗೆ ಸಮಸ್ತ ಮಹಿಳಾ ಸಮುದಾಯದ ಪ್ರತಿಬಿಂಬ. ಅವರ ಬಗ್ಗೆ ಬಳಸಿದ ಅಸಭ್ಯ ಪದಗಳು ರಾಜ್ಯದ ಎಲ್ಲಾ ಮಹಿಳೆಯರಿಗೆ ಅವಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

oplus_0

ಸಾರ್ವಜನಿಕ ಜೀವನದಲ್ಲಿ ಮತ್ತು ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಈ ರೀತಿಯ ಹೇಳಿಕೆಗಳು ಬರುವುದು ಅತ್ಯಂತ ವಿಷಾದನೀಯ ಎಂದು ಬೇಸರಿಸಿದೆ.

ಆದ್ದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕೇಂದ್ರ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಲ್ಲಿ ಮತ್ತು ಸಮಸ್ತ ರಾಜ್ಯದ ಮಹಿಳಾ ಸಮುದಾಯದಲ್ಲಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಮನವಿ ಮಾಡಿದೆ.ಇಂತಹ ಅಸಂಸ್ಕೃತ ಭಾಷಾ ಪ್ರಯೋಗಗಳನ್ನು ತಕ್ಷಣ ನಿಲ್ಲಿಸಿ, ಸಂವಿಧಾನಾತ್ಮಕ ಹುದ್ದೆಗಳಿಗೆ ಗೌರವ ನೀಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಬೇಕು.

ಮುಂದಿನ ದಿನಗಳಲ್ಲಿ ಸರ್ಕಾರದಿಂದ ಈ ರೀತಿಯ ಅಸಭ್ಯ ವರ್ತನೆಗಳು ಪುನರಾವರ್ತನೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದೆ.

ಈ ಮೂಲಕ ಶಿವಮೊಗ್ಗ ನಗರ ಮಹಿಳಾ ಮೋರ್ಚಾ ವತಿಯಿಂದ ತೀವ್ರವಾಗಿ ಖಂಡಿಸಿದೆ.ಈ ಒಂದು ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮುಖಂಡರು, ನಗರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Author