ಖ್ಯಾತ ಗಾಯಕಿ ಆಶಾ ಭೋಸ್ಲೆ (92) ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಶಾ ಭೋಸ್ಲೆ ಅವರಿಗೆ ಶನಿವಾರ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಗಾಯಕಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ಪ್ಲೇ ಬ್ಯಾಕ್ ಸಿಂಗರ್ ಆಶಾ ಭೋಸ್ಲೆ ನಿಧನರಾಗಿದ್ದಾರೆ. 92 ವರ್ಷದ ಆಶಾ ಭೋಸ್ಲೆ ಆರೋಗ್ಯ ಏರುಪೇರಾದ ಹಿನ್ನಲೆಯಲ್ಲಿ ಎಪ್ರಿಲ್ 11 ರಂದು ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸಂಪೂರ್ಣ ಕ್ಷೀಣಿಸಿದ್ದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಕಳೆದೊಂದು ದಿನದಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಕಿ ಇಂದು ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ಗಾಯಕಿ ಅಶಾ ಭೋಸ್ಲೆ ನಿಧನವನ್ನು ಪುತ್ರ ಆನಂದ್ ಭೋಸ್ಲೆ ಖಚಿತಪಡಿಸಿದ್ದಾರೆ. ಅಶಾ ಭೋಸ್ಲೆ ಅಂತಿ ವಿಧಿ ವಿಧಾನ ನಾಳೆ (ಏ.13) ನಡೆಯಲಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆನಂದ್ ಭೋಸ್ಲೆ ಹೇಳಿದ್ದಾರೆ.
ಪಿಯಾ ತು ಅಬ್ ತೋ ಆಜಾ, ಕಜ್ರಾ ಮೊಹಬ್ಬತ್ ವಾಲಾ, ರಂಗೀಲಾ ರೇ ಮತ್ತು ದಿಲ್ ಚೀಜ್ ಕ್ಯಾ ಹೈ ಎಂಬ ಪ್ರಸಿದ್ಧ ಹಾಡುಗಳ ಮೂಲಕ ಹೆಸರುವಾಸಿಯಾದ ಆಶಾ ಭೋಸ್ಲೆ ಅವರು ಈ ವರ್ಷದ ಸೆಪ್ಟೆಂಬರ್ 8ರಂದು 93ನೇ ವಯಸ್ಸನ್ನು ಪೂರ್ಣಗೊಳಿಸಬೇಕಾಗಿತ್ತು. ಅವರ ನಿಧನವು, ಅವರ ಹಾಡುಗಳನ್ನು ಕೇಳುತ್ತ ಬೆಳೆದ ಅನೇಕ ಸಂಗೀತಪ್ರಿಯರ ಮನಗಳಲ್ಲಿ ಆಘಾತವನ್ನು ಉಂಟುಮಾಡಿದೆ.
ಆಶಾ ಭೋಸ್ಲೆ ಅವರು ಕೇವಲ 10ನೇ ವಯಸ್ಸಿನಲ್ಲಿ 1943ರ ಮರಾಠಿ ಚಿತ್ರ ‘ಮಾಜಾ ಬಾಲ್’ಗಾಗಿ ‘ಚಲಾ ಚಲಾ ನವ ಬಾಲಾ’ ಎಂಬ ತಮ್ಮ ಮೊದಲ ಚಲನಚಿತ್ರ ಗೀತೆಯನ್ನು ಹಾಡಿದ್ದರು. ಆರಂಭದಲ್ಲಿ ‘ಓ ಹಸೀನಾ ಜುಲ್ಫೋನವಾಲಿಯಂತಹ ನೃತ್ಯಗೀತೆಗಳಿಗೆ ಮಾತ್ರ ಸೀಮಿತಗೊಳಿಸಲ್ಪಟ್ಟಿದ್ದ ಅವರು, ನಂತರ ‘ದಿಲ್ ಚೀಜ್ ಕ್ಯಾ ಹೈ’ ಎಂಬ ಘಝಲ್‌ಗಳು ಹಾಗೂ ‘ತೋರಾ ಮನ ದರ್ಪಣ ಕಹಲಾಯೆ’ಯಂತಹ ಶಾಸ್ತ್ರೀಯ ಗೀತೆಗಳ ಮೂಲಕ ತಮ್ಮ ಗಾನ ಸಾಮರ್ಥ್ಯದ ಆಳವನ್ನು ಸಾಬೀತುಪಡಿಸಿದರು.
ಆಶಾ ಭೋಸ್ಲೆಯವರ ನಿಧನಕ್ಕೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು, ಬಾಲಿವುಡ್ ದಿಗ್ಗಜರು ಕಂಬನಿ ಮಿಡಿದಿದ್ದಾರೆ.


