ಭಟ್ಕಳ,ದೇಶಾದ್ಯಂತ ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆ ಮತ್ತು ವಿತರಣೆಯ ಗೊಂದಲಗಳ ನಡುವೆ, ಭಟ್ಕಳದಲ್ಲಿ ನಡೆದ ಮದುವೆಯೊಂದರಲ್ಲಿ ನೀಡಲಾದ ವಿಭಿನ್ನ ಉಡುಗೊರೆಯೊಂದು ಈಗ ದೊಡ್ಡ ಕಾನೂನು ಸಂಕಷ್ಟಕ್ಕೆ ನಾಂದಿ ಹಾಡಿದೆ.
ಮದುವೆಯ ಸಂಭ್ರಮದಲ್ಲಿದ್ದ ನವಜೋಡಿಗೆ ಸಂಬಂಧಿಕರು ನೀಡಿದ ‘ಸಿಲಿಂಡರ್ ಉಡುಗೊರೆ’ ಈಗ ತಾಲೂಕು ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ.
ನಡೆದಿದ್ದೇನು?
ಭಟ್ಕಳದ ವಿವೇಕ್ ಮಹಾಲೆ ಮತ್ತು ನಾಗಸಂಧ್ಯಾ ಶಾಂತಿ ಅವರ ವಿವಾಹ ಮಹೋತ್ಸವದಲ್ಲಿ ಸಂಬಂಧಿಕರೊಬ್ಬರು ಎಲ್ಪಿಜಿ ಸಿಲಿಂಡರ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಈ ವಿಭಿನ್ನ ಉಡುಗೊರೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ತಾಲೂಕು ಆಡಳಿತ, ವರನಿಗೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ.
ಆಡಳಿತ ಆಕ್ಷೇಪ
ಈ ಕುರಿತು ಪ್ರತಿಕ್ರಿಯಿಸಿರುವ ಭಟ್ಕಳ ತಹಶೀಲ್ದಾರ್ ನಾಗೇಂದ್ರ ಕೊಲಶೆಟ್ಟಿ ಅವರು, ಮದುವೆಯಲ್ಲಿ ಗ್ಯಾಸ್ ಸಿಲಿಂಡರ್ ಉಡುಗೊರೆ ನೀಡುವುದು ಅಚ್ಚರಿಯ ಸಂಗತಿ ಎಂದು ಹೇಳಿದ್ದಾರೆ.
ನಿಯಮಗಳ ಪ್ರಕಾರ ಸಿಲಿಂಡರ್ ಅನ್ನು ಈ ರೀತಿ ವರ್ಗಾಯಿಸಲು ಅಥವಾ ಉಡುಗೊರೆಯಾಗಿ ನೀಡಲು ಅವಕಾಶವಿಲ್ಲ ಎಂದು ತಿಳಿಸಿರುವ ಅವರು, ಈ ಕುರಿತು ಆಹಾರ ನಿರೀಕ್ಷಕರಿಂದ ಸಂಪೂರ್ಣ ವರದಿ ಕೇಳಿದ್ದಾರೆ.
ಈ ವರದಿಯನ್ನು ಶೀಘ್ರದಲ್ಲೇ ಕಾರವಾರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.ತಾಲೂಕಿನಲ್ಲಿ ಸಿಲಿಂಡರ್ ಕೊರತೆಯಿಲ್ಲದಿದ್ದರೂ, ಸುರಕ್ಷತೆ ಮತ್ತು ನಿಯಮದ ದೃಷ್ಟಿಯಿಂದ ಇದು ಕಾನೂನುಬಾಹಿರ ಎನ್ನಲಾಗಿದೆ.
ಇತ್ತ ಮದುವೆ ಮುಗಿಸಿ ತಿರುಪತಿಗೆ ತೆರಳಿದ್ದ ದಂಪತಿಗೆ ಈ ನೋಟಿಸ್ ಸುದ್ದಿ ತಲುಪಿದ್ದು, ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


