ಶಿವಮೊಗ್ಗ | ನಗರ ವಿಕಾಸ ಯೋಜನೆ ಕಾಮಗಾರಿ ಅನುಷ್ಟಾನದಲ್ಲಿ ಶಿಷ್ಟಾಚಾರ ಉಲ್ಲಂಘನೆ :ಎಚ್. ಸಿ. ಯೋಗೇಶ್ ಆರೋಪ

ರಾಜಕೀಯ

ಶಿವಮೊಗ್ಗ,125 ಕೋಟಿ ರೂಪಾಯಿಯ ನಗರ ವಿಕಾಸ ಯೋಜನೆಯ ಶಿವಮೊಗ್ಗ ನಗರದ 35 ವಾರ್ಡ್‌ಗಳಿಗೂ ಅನುಮೋದನೆಯಾಗಿದ್ದು ನಗರ ವಿಕಾಸ ಯೋಜನೆ ಕಾಮಗಾರಿ ಅಡಿಯಲ್ಲಿ ಬಹಳಷ್ಟು ವಾರ್ಡ್‌ಗಳ ರಸ್ತೆ , ಚರಂಡಿ, ಒಳಚರಂಡಿ ಈ ರೀತಿಯ ಅನೇಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಈ ನಗರ ವಿಕಾಸ ಯೋಜನೆಯ ಅಧ್ಯಕ್ಷರಾಗಿರುವುದರಿಂದ ಈ ಯೋಜನೆಯ ಚಾಲನೆಯು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನೇತೃತ್ವದಲ್ಲಿ ಚಾಲನೆ ನೀಡಬೇಕೆಂದು ಆಗ್ರಹಿಸಿ ಮಹಾನಗರಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೀಶ್ ಹಾಗೂ ಕಾಂಗ್ರೆಸ್ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಶಾಸಕ ಎಸ್.ಎನ್. ಚನ್ನಬಸಪ್ಪ ಸಂಪೂರ್ಣ ಶಿಷ್ಟಾಚಾರವನ್ನು ಉಲ್ಲಂಘಿಸಿ ಕಾರ್‍ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಾರೆ, ಚನ್ನಬಸಪ್ಪ ಮಹಾನಗರ ಪಾಲಿಕೆಯ ಸದಸ್ಯರಾಗಿ ನಗರ ಸಭೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರೂ ಸಹ ಶಿಷ್ಟಾಚಾರದ ಬಗ್ಗೆ ತಿಳಿಯದಿರುವುದು ಖಂಡನೀಯ.

ಶಿಷ್ಟಾಚಾರದ ರೀತಿಯಲ್ಲಿ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ ಕೈಯಲ್ಲಿ ಉದ್ಘಾಟನೆ ನೆರವೇರಿಸಿ ಶಿವಮೊಗ್ಗ ನಗರ ಜನತೆಗೆ ಅನುಕೂಲವಾಗುವ ಈ ಯೋಜನೆಗಳಿಗೆ ಚಾಲನೆ ಕೊಡಿಸಬೇಕೆಂದು ಮನವಿ ಮಾಡಿದರು.

ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶಿವಕುಮಾರ್ ಹಾಗೂ ಮಾಜಿ ಮಹಾ ನಗರ ಪಾಲಿಕೆ ಸದಸ್ಯ ವಿಶ್ವನಾಥ್ ಕಾಶಿ, ಯಮುನಾ ರಂಗೇಗೌಡ, ನಾಗರಾಜ್ ಕಂಕಾರಿ, ಪಾಲಾಕ್ಷಿ, ಮುನ್ನಾ, ಯೂತ್ ಕಾಂಗ್ರೆಸ್ ಅಧ್ಯಕ್ಷ ಚರಣ್ ಶೆಟ್ಟಿ, ರಮೇಶ್, ರಾಜಣ್ಣ, ಗಂಗಾಧರ್, ನವೀನ್, ಮಧು, ಪವನ್, ಶರತ್ ಎಸ್.ಕೆ. ಉಪಸ್ಥಿತರಿದ್ದರು.

Author