ಶಿವಮೊಗ್ಗ | ಶಾಲಾ- ಕಾಲೇಜು ಡೊನೇಷನ್ ಹಾವಳಿ ತಪ್ಪಿಸಲು ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ

ಶಿವಮೊಗ್ಗ

ಶಿವಮೊಗ್ಗ,ಖಾಸಗಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಪ್ರವೇಶಕ್ಕೆ ಸರ್ಕಾರದ ನಿಯಮದಂತೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಹಾಗೂ ಡೊನೇಷನ್ ಪಡೆಯುವ ಆಡಳಿತ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಸಿಇಓ ಹೇಮಂತ್ ಎನ್. ತಿಳಿಸಿದ್ದಾರೆ.

ಡೊನೇಷನ್‌ಹಾವಳಿ ಎಲ್ಲೆಡೆ ಹೆಚ್ಚಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ ಅವರು, ಶೀಘ್ರವೇ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮುಖ್ಯ ಶಿಕ್ಷಕರೊಂದಿಗೆ ಸಭೆ ನಡೆಸಿ ಸರ್ಕಾರದ ನಿಯಮ ಪಾಲಿಸುವಂತೆ ಸೂಚಿಸಲಾಗುವುದು ಎಂದರು.

ಒಂದನೇ ತರಗತಿ ಹಾಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಡೊನೇಷನ್ ಪಡೆಯುವ ಮೂಲಕ ಪೋಷಕರ ಸುಲಿಗೆ ಮಾಡುತ್ತಿರುವುದು ಹಾಗೂ ಕಟ್ಟಡ ನಿದಿ ಹೆಸರಿನಲ್ಲಿ ಅನಗತ್ಯ ಡೊನೇಷನ್ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ಲೆಕ್ಕಪತ್ರಗಳ ಪರಿಶೀಲನೆ ಮಾಡುವಂತೆ ಡಿಡಿಪಿಯುಗೆ ಅವರಿಗೆ ಸೂಚನೆ ನೀಡಿದರು.

ಇದಲ್ಲದೆ ಪರವಾನಿಗೆ ಪಡೆಯದೆ ನಡೆಸುತ್ತಿರುವ ಕೋಚಿಂಗ್ ಸೆಂಟರ್‌ಗಳ ಬಗ್ಗೆ ಕ್ರಮ ಕೈಗೊಳ್ಳಲು ಹಾಗೂ ಮೂಲಭೂತಸೌಲಭ್ಯ ಇಲ್ಲದೆ ಕೋಚಿಂಗ್ ಸೆಂಟರ್ ನಡೆಸುವವರಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.

ಡ್ರಾಪ್‌ಔಟ್: ಪಿಯುಸಿ ನಂತರ ಶಿಕ್ಷಣ ಮುಂದುವರೆಸದೆ ಮನೆಯಲ್ಲೇ ಉಳಿಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಶಿಕ್ಷಣದತ್ತ ಕರೆತರಲು ಪ್ರಯತ್ನಿಸಲಾಗುವುದು. ಹಾಸ್ಟೆಲ್ ಸೇರಿದಂತೆ ಕೆಲ ಸೌಲಭ್ಯಗಳಿಲ್ಲದೆ ಶಿಕ್ಷಣದಿಂದ ದೂರ ಉಳಿದವರಿಗೆ ಸರ್ಕಾರದಿಂದ ಆಗುವ ಅಗತ್ಯ ಅನುಕೂಲ ಮಾಡಿಕೊಟ್ಟು ಶಿಕ್ಷಣದಲ್ಲಿ ಮುಂದುವರೆಯುವಂತೆ ನೋಡಿಕೊಳ್ಳಲು ವಿಶೇಷ ಗಮನ ಹರಿಸುವುದಾಗಿ ಹೇಮಂತ್ ತಿಳಿಸಿದರು.

ಫಲಿತಾಂಶ ಹೆಚ್ಚಳಕ್ಕೆ ಕ್ರಮ: ಜಿಲ್ಲೆಯ ದ್ವಿತೀಯ ಪಿಯುಸಿ ಪಲಿತಾಂಶ ಶೇ.೮೭ ಬಂದಿದ್ದು, ಮುಂದಿನ ವರ್ಷ ಇದನ್ನು ಶೇ.೯೦ರ ಗಡಿ ದಾಟಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕೋಚಿಂಗ್ ಹಾಗೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾದ ವಿಷಯಕ್ಕೆ ಒತ್ತು ನೀಡಿ ಅಭ್ಯಾಸ ಮಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

Author