ಶಿವಮೊಗ್ಗ,ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ರವರು ಅಸ್ಸಾಂನ ನಿಲಾಂಬಜಾರ್‌ನಲ್ಲಿ ಭಾಷಣದಲ್ಲಿ ಬಿಜೆಪಿ ಮತ್ತು ಆರ್.ಎಸ್.ಎಸ್ ಬಗ್ಗೆ ಹೇಳಿದ ಮಾತು ಅತ್ಯಂತ ಹೇಯ, ಮತ್ತು ಹಿಂಸೆಗೆ ಪ್ರಚೋದನೆ ನೀಡುವಂತದ್ದಾಗಿದೆ. ಇಂತಹ ಕೀಳುಮನಸ್ಥಿತಿಯ ಹೇಳಿಕೆಗಳನ್ನು ನಾನು ತೀರ್ವವಾಗಿ ಖಂಡಿಸುತ್ತೇನೆ.
ರಾಜಕೀಯ ವಿರೋಧಿಗಳನ್ನು “ವಿಷ ಸರ್ಪಗಳಿಗೆ ಹೋಲಿಸಿ, ಅವರನ್ನು “ಕೊಲ್ಲಬೇಕು” ಎಂದು ಕರೆ ನೀಡಿರುವುದು ಅವರ ಸರ್ವಾಧಿಕಾರಿ ಮನಸ್ಥಿತಿಯನ್ನು ಬಿಂಬಿಸುತ್ತದೆ.
“ನಮಾಜ್ ಮಾಡುವಾಗ ವಿಷ ಸರ್ಪ ಬಂದರೆ ಅದನ್ನು ಕೊಲ್ಲಬಹುದು ಎಂದು ಕುರಾನ್ ಹೇಳುತ್ತದೆ. ಅದೇ ರೀತಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿಷ ಸರ್ಪಗಳಂತಿವೆ. ಅವುಗಳನ್ನು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ, ಅವುಗಳನ್ನು ನಿರ್ನಾಮ ಮಾಡಬೇಕು” ಎಂಬ ಹೇಳಿಕೆ ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಹಾಗೂ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿದೆ.
ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವಿದ್ದರೂ, ಅದು ವೈಯಕ್ತಿಕ ಘನತೆಗೆ ಧಕ್ಕೆ ತರುವಂತಿರಬಾರದು ಮತ್ತು ಹಿಂಸೆಗೆ ಪ್ರಚೋದನೆ ನೀಡುವಂತಿರಬಾರದು.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಆರೋಗ್ಯಕರ ಚರ್ಚೆಗಳ ಮೂಲಕ ಪರಿಹಾರವಾಗಬೇಕೇ ಹೊರತು ದ್ವೇಷದ ಮೂಲಕವಲ್ಲ ಎಂಬುದನ್ನು ಖರ್ಗೆ ರವರು ಮರೆತಂತಿದೆ.ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ನಾಯಕರು, ಕೋಟ್ಯಂತರ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಕೊಲ್ಲುವಂತೆ ಸಾರ್ವಜನಿಕವಾಗಿ ಪ್ರಚೋದನೆ ನೀಡಿರುವುದು ಕಾನೂನುಬಾಹಿರ ಮತ್ತು ನೇರವಾದ ಪ್ರಾಣ ಬೆದರಿಕೆಯಾಗಿದೆ.
ಧಾರ್ಮಿಕ ಉಲ್ಲೇಖಗಳನ್ನು ಬಳಸಿಕೊಂಡು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕ ಬಗೆಹರಿಸಿಕೊಳ್ಳಲು ಜನರನ್ನು ಎತ್ತಿಕಟ್ಟುವ ಕಾಂಗ್ರೆಸ್ ಪ್ರಯತ್ನ ಅತ್ಯಂತ ಅಪಾಯಕಾರಿಯಾದ ಬೆಳವಣಿಗೆಯಾಗಿದೆ.
ವಿರೋಧ ಪಕ್ಷಗಳನ್ನು ಸೈದ್ಧಾಂತಿಕವಾಗಿ ಎದುರಿಸುವ ಬದಲು ‘ನಿರ್ನಾಮ’ ಮಾಡಬೇಕೆಂಬ ಇವರ ಮಾತುಗಳು ಕಾಂಗ್ರೆಸ್‌ನ ಹಳೆಯ ‘ತುರ್ತು ಪರಿಸ್ಥಿತಿ’ಯ ಕರಾಳ ದಿನಗಳನ್ನು ನೆನಪಿಸುತ್ತಿವೆ.
ಪ್ರಜಾಪ್ರಭುತ್ವದಲ್ಲಿ ಸಿದ್ಧಾಂತಗಳ ನಡುವೆ ಹೋರಾಟ ಇರಬೇಕೇ ಹೊರತು, ರಕ್ತಪಾತಕ್ಕೆ ಕರೆ ನೀಡುವ ಇಂತಹ ಪ್ರಚೋದನೆಗಳಲ್ಲ. ಇದು ಕಾಂಗ್ರೆಸ್ ಇಳಿದಿರುವ ಅತ್ಯಂತ ಕೆಳಮಟ್ಟದ ರಾಜಕಾರಣವಾಗಿದೆ.
ದೇಶದಲ್ಲಿ ಅಶಾಂತಿ ಹರಡಲು ಮತ್ತು ಹಿಂಸಾಚಾರಕ್ಕೆ ಮುಕ್ತವಾಗಿ ಪ್ರಚೋದನೆ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ದ್ವೇಷ ಭಾಷಣದ (Hate Speech) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ, ತಕ್ಷಣ ಅವರನ್ನು ಬಂಧಿಸಬೇಕೆಂದು ನಾನು ಆಗ್ರಹಿಸುತ್ತೇನೆ. ಎಂದು ಎಸ್.ದತ್ತಾತ್ರಿ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕರು ಪತ್ರಿಕಾ ಪ್ರಕಟಣೆ ಮೂಲಕ ಅಗ್ರಹಿಸಿದ್ದಾರೆ.


