ಬೆಂಗಳೂರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿಯ ಕ್ಷೇತ್ರದಲ್ಲಿ ಮತದಾನವಾಗಿರುವ ಒಟ್ಟು ಪೋಸ್ಟಲ್ ಬ್ಯಾಲೆಟ್ನಲ್ಲಿ ತಿರಸ್ಕೃತಗೊಂಡಿರುವ 279 ಮತಗಳನ್ನು ಮರು ಪರಿಶೀಲನೆ ನಡೆಸಿ, ಹೊಸದಾಗಿ ಫಲಿತಾಂಶ ಪ್ರಕಟ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.ಶೃಂಗೇರಿ ಕ್ಷೇತ್ರದಿಂದ ಜಯ ಗಳಿಸಿರುವ ಟಿ. ಡಿ. ರಾಜೇಗೌಡ ಅವರ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಡಿ. ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ನಟರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಮುಂದಿನ ಎರಡು ವಾರಗಳಲ್ಲಿ ತಿರಸ್ಕೃತ 279 ಪೋಸ್ಟಲ್ ಬ್ಯಾಲೆಟ್ನ ಮತಗಳನ್ನು ಮರು ಪರಿಶೀಲನೆ ನಡೆಸಬೇಕು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಕೈಪಿಡಿಯ ಮಾರ್ಗಸೂಚಿಗಳು-2023ರ ಮಾರ್ಗಸೂಚಿ 15(14)(7)ನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
ತಿರಸ್ಕೃತ ಮತಗಳ ಮರು ಪರಿಶೀಲನೆ ಸಂದರ್ಭದಲ್ಲಿ ಅರ್ಜಿದಾರರು ಮತ್ತು ಪ್ರತಿವಾದಿ ರಾಜೇಗೌಡ ಅವರಿಗೆ ಹಂಚಿಕೆಯಾಗಿರುವ ಮತಗಳಲ್ಲಿ ಯಾವುದೇ ಗಣನೀಯ ಲೋಪ ಕಂಡುಬಂದಲ್ಲಿ ಎಲ್ಲ ಪೋಸ್ಟ್ ಬ್ಯಾಲೆಟ್ಗಳ ಮತಗಳನ್ನು ಮರು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಪೀಠ ತಿಳಿಸಿದೆ.ಜತೆಗೆ, ಆದೇಶದ ಪ್ರತಿಯನ್ನು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ, ಜಿಲ್ಲಾ ಮುಖ್ಯ ಚುನಾವಣಾಧಿಕಾರಿಗಳು ಮತ್ತು ಶೃಂಗೇರಿಯ ಚುನಾವಣಾಧಿಕಾರಿಯವರಿಗೆ ಇ-ಮೇಲ್ ಇಲ್ಲವೇ ಸ್ಪೀಡ್ ಪೋಸ್ಟ್ ಮೂಲಕ ರವಾನಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್ಗೆ ಸೂಚನೆ ನೀಡಿದೆ.
ಆದೇಶ ಪ್ರಕಟವಾಗುತ್ತಿದ್ದಂತೆ ರಾಜೇಗೌಡ ಪರ ವಕೀಲರು, ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚುನಾವಣೆ ಫಲಿತಾಂಶವನ್ನು ರದ್ದುಗೊಳಿಸಿಲ್ಲ ಎಂದು ತಿಳಿಸಿತು.
ಅಲ್ಲದೆ, ಈ ಆದೇಶಕ್ಕೆ ಎರಡು ವಾರಗಳ ಕಾಲ ತಡೆ ನೀಡಿ ಆದೇಶಿಸಿತು. ಅರ್ಜಿದಾರರ ಪರ ವಕೀಲರಾದ ಪಿ. ಎಲ್. ವಂದನಾ ವಕಾಲತ್ತು ವಹಿಸಿದ್ದರು.
ಪ್ರಕರಣದ ಹಿನ್ನೆಲೆ :
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಡಿ. ಟಿ. ರಾಜೇಗೌಡ 201 ಮತಗಳಿಂದ ಜಯಶಾಲಿಯಾಗಿದ್ದರು. ಆದರೆ, ಪೋಸ್ಟಲ್ ಬ್ಯಾಲೆಟ್ನಲ್ಲಿ 1811 ಮತದಾನ ನಡೆದಿದ್ದು, ಈ ಮತಗಳಲ್ಲಿ 279 ಮತಗಳನ್ನು ತಿರಸ್ಕರಿಸಲಾಗಿತ್ತು.
ಈ ಸಂಬಂಧ ಪೋಸ್ಟಲ್ ಬ್ಯಾಲೆಟ್ನಲ್ಲಿ ಬಂದಿದ್ದ ಮತಗಳ ಮರು ಪರಿಶೀಲನೆಗೆ ಕೋರಿ ಪರಾಜಿತ ಅಭ್ಯರ್ಥಿ ಜೀವರಾಜ್ ಸಲ್ಲಿಸಿದ್ದ ಮನವಿಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು.
ಈ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಮತ ಎಣಿಕೆ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ನಿಯಮ 15ರ ಪ್ರಕಾರ ಪೋಸ್ಟಲ್ ಬ್ಯಾಲೆಟ್ ಮತಗಳಲ್ಲಿ ಕಡಿಮೆ ಅಂತರ ಇದ್ದಲ್ಲಿ ಮರು ಎಣಿಕೆ ನಡೆಸುವುದು ಕಡ್ಡಾಯವಾಗಿದೆ.
ಆದರೆ, ಚುನಾವಣಾಧಿಕಾರಿಗಳು ಅದಕ್ಕೆ ಮುಂದಾಗಿಲ್ಲ. ಜತೆಗೆ, ಯಾವ ಕಾರಣಕ್ಕಾಗಿ ಮತಗಳು ತಿರಸ್ಕೃತಗೊಂಡಿವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಆದ್ದರಿಂದ ಚುನಾವಣಾ ಫಲಿತಾಂಶ ಅಸಿಂಧು ಎಂದು ಘೋಷಣೆ ಮಾಡಬೇಕು. ಮರು ಮತ ಎಣಿಕೆಗೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.


