ಬೃಹತ್ ಕಾಳಿಂಗನ ಯಶಸ್ವಿ ಸೆರೆ

ಉತ್ತರ ಕನ್ನಡ

ಕುಮಟಾ ತಾಲೂಕಿನ ಯಲವಳ್ಳಿಯ ಲಕ್ಷ್ಮೀ ನಾರಾಯಣ ಹೆಗಡೆ ಎನ್ನುವವರ ಮನೆಯ ತೋಟದಲ್ಲಿ ಸುಮಾರು 15 ಅಡಿ ಉದ್ದ ಹಾಗೂ ಬರೋಬ್ಬರಿ 11.340 ಕೆ.ಜಿ ತೂಕದ ಬೃಹತ್ ಕಾಳಿಂಗ ಸರ್ಪವೊಂದನ್ನು ಯಶಸ್ವಿಯಾಗಿ ಸೆರೆಹಿಡಿದು ಅರಣ್ಯಕ್ಕೆ ಬಿಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲೇ ಇಷ್ಟು ಭಾರದ ಕಾಳಿಂಗ ಸರ್ಪ ಎಲ್ಲೂ ಪತ್ತೆಯಾದ ದಾಖಲೆಗಳಿಲ್ಲ ಎನ್ನಲಾಗಿದ್ದು, ಈ ಘಟನೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಕಾಳಿಂಗಗಳ ಕಾಳಗ ಮತ್ತು ಆತಂಕ:

ಕಳೆದ 5 ದಿನಗಳ ಹಿಂದೆ ಈ ತೋಟದಲ್ಲಿ ಎರಡು ಕಾಳಿಂಗ ಸರ್ಪಗಳು ಭೀಕರವಾಗಿ ಸೆಣಸಾಟ ನಡೆಸಿದ್ದವು. ಆ ಕಾಳಗದ ನಂತರ ದೊಡ್ಡ ಕಾಳಿಂಗ ಸರ್ಪವು ಸಣ್ಣ ಕಾಳಿಂಗವನ್ನು ಸಂಪೂರ್ಣವಾಗಿ ನುಂಗಿ ಹಾಕಿತ್ತು.

ಬೇರೆ ಹಾವನ್ನು ನುಂಗಿದ್ದರಿಂದ ಜೀರ್ಣಿಸಿಕೊಳ್ಳಲು ವಿಶ್ರಾಂತಿಯ ಅಗತ್ಯವಿದ್ದ ಕಾರಣ, ಆ ಹಾವು ಸುಮಾರು 5-6 ದಿನ ಕಳೆದರೂ ತೋಟ ಬಿಟ್ಟು ಕದಲದೆ ಅಲ್ಲೇ ಠಿಕಾಣಿ ಹೂಡಿತ್ತು. ಜನರು ತೋಟದಲ್ಲಿ ಓಡಾಡುವಾಗ ಪದೇ ಪದೆ ಹಾವಿನ ಸಮೀಪವೇ ಹೋಗಬೇಕಾಗಿ ಬರುತ್ತಿದ್ದರಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು.

ಕಚ್ಚುವ ಭಯದಿಂದ ಕಳೆದ 3-4 ದಿನಗಳಿಂದ ಕೆಲಸದವರು ಯಾರೂ ಬಾರದೆ ತೋಟದ ಕೆಲಸಗಳೆಲ್ಲವೂ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು.

ದಾಖಲೆಯ 100ನೇ ರಕ್ಷಣೆ:

ಹಾವಿನಿಂದ ಜನರಿಗೆ ಅಥವಾ ಜನರಿಂದ ಹಾವಿಗೆ ಯಾವುದೇ ಅಪಾಯವಾಗಬಾರದೆಂಬ ಕಾಳಜಿಯಿಂದ ಉರಗ ಸಂರಕ್ಷಕ ಪವನ್​ ನಾಯ್ಕ್​ ಅವರು ಸ್ಥಳಕ್ಕೆ ಬಂದು ಅತ್ಯಂತ ಜಾಗರೂಕತೆಯಿಂದ ಕಾಳಿಂಗ ಸರ್ಪವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.

ನಂತರ ಅದನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಯ ದಟ್ಟ ಕಾಡಿಗೆ ಬಿಡಲಾಯಿತು. ವಿಶೇಷವೆಂದರೆ, 16 ವರ್ಷಗಳಿಂದ ಹಾವುಗಳನ್ನು ರಕ್ಷಿಸುತ್ತಾ ಬಂದಿರುವ ಈ ಉರಗ ಪ್ರೇಮಿ ಪವನ್​ ನಾಯ್ಕ್​ ಪಾಲಿಗೆ ಇದು 100ನೇ ಕಾಳಿಂಗ ಸರ್ಪದ ರಕ್ಷಣೆಯಾಗಿದೆ.

Author