ಶಿವಮೊಗ್ಗ, ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಸರ್ಕಾರವು ಸ್ಪಷ್ಟನೆ ನೀಡುತ್ತಿದೆ. ಅನೇಕ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿರುವ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು, ‘ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ’ ಎಂಬ ಮಾತನ್ನೇ ಪುನರುಚ್ಛರಿಸುತ್ತಿದ್ದಾರೆ. ಅವರ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಅವರದ್ದೇ ಸರ್ಕಾರದ ದಾಖಲೆಗಳ ಆಧಾರದಲ್ಲಿ ಪರಿಶೀಲಿಸಿದಾಗ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು 40,000ಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಅಂಶ ಬೆಳಕಿಗೆ ಬಂದಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಒರ್ಗನೈಸಷನ್ (ಎಐಡಿಎಸ್ ಓ) ಹೇಳಿದೆ.
ಸಂಘಟನೆಯ ಜಿಲ್ಲಾ ಸಂಚಾಲಕ ವಿನಯ್ ಚಂದ್ರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಗ್ರಾಮ ಪಂಚಾಯಿತಿಗೆ ಒಂದರಂತೆ ರಾಜ್ಯದಲ್ಲಿ 6,000 ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರವು ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ 800 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿದೆ.
ದಿ. 15/10/2025ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಈ ಕುರಿತು ಆದೇಶಿಸಲಾಗಿದೆ ಎಂದರು. ಶಿವಮೊಗ್ಗ ಜಿಲ್ಲೆಯೊಂದರಲ್ಲೇ 1518 ಶಾಲೆಗಳನ್ನು ಮುಚ್ಚಲು ಪಟ್ಟಿ ಮಾಡಲಾಗಿದೆ. ಜಿಲ್ಲೆಯ ಹೊಸನಗರ ತಾಲ್ಲೂಕಿನ ಹುಂಚಾ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಿಲೇರಿಮೂಡಲಿಯ ಕಿರಿಯ ಪ್ರಾಥಮಿಕ ಶಾಲೆಯನ್ನು ಬಿಲ್ಲೇಶ್ವರದ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ಮತ್ತು ಸಾಗರ ತಾಲ್ಲೂಕಿನ ತಡಗಳಲೆ ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ, ತಡಗಳಲೆ ಎನನ್ ನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸುಳ್ಳೂರಿನಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಯನ್ನು ಕಣಸೆ ಹಿರಿಯ ಪ್ರಾಥಮಿಕ ಶಾಲೆಯೊಳಗೆ ವಿಲೀನಗೊಳಿಸಲಿದ್ದಾರೆ.
ಇದೇ ರೀತಿ ಜಿಲ್ಲೆಯಾದ್ಯಂತ 1518 ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಎಂದು ಹೇಳಿದರು.
ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರುಗಳು, ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಂತೆ, ಸೇವಾ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ.
ಕೇವಲ ಶಾಲೆಗಳಷ್ಟೇ ಅಲ್ಲದೆ ರಾಜ್ಯದ ಸಾವಿರಾರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಕೂಡ ಮುಚ್ಚುವ ಅಪಾಯಕ್ಕೆ ಸಿಲುಕಿವೆ ಎಂದರು.ರಾಜ್ಯದಲ್ಲಿ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂಬ ಸರ್ಕಾರದ ಸ್ಪಷ್ಟನೆ ಮತ್ತು ಮಾಧ್ಯಮಗಳೆದುರಿಗೆ ರಾಜ್ಯದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವರು, ಹೇಳುತ್ತಿರುವ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾವ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಬೇಕು ಮತ್ತು ಆ ಶಾಲೆಗೆ ಯಾವ ಯಾವ ಶಾಲೆಗಳನ್ನು ಸೇರಿಸಬೇಕು ಎಂಬುದರ ಪೂರ್ಣ ಪಟ್ಟಿಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ.
ಶಾಲೆಗಳ ಅಭಿವೃದ್ಧಿಯ ಹೆಸರಲ್ಲಿ ರಾಜ್ಯದ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿದುಕೊಳ್ಳುವ ಸರ್ಕಾರದ ಘೋರ ಹುನ್ನಾರ ಇದಾಗಿದೆ ಎಂದರು.



