ಶಿವಮೊಗ್ಗ ತಾಲೂಕಿನ ಸವಳಂಗ-ಶಿಕಾರಿಪುರ ರಸ್ತೆಯ ಹಳೆಜೋಗ- ಜಯನಗರ ಗ್ರಾಮದ ಮಧ್ಯೆ ಸೋಮವಾರ ಚಾಲಕನ ಅಜಾಗರೂಕ ಚಾಲನೆಯಿಂದ ಟ್ರ್ಯಾಕ್ಟರ್‌ನ ಟ್ರೈಲರ್ ಕಳಚಿ ಬಿದ್ದ ಪರಿಣಾಮ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿದ್ದು, ಎಂಟು ಜನ ಗಾಯಗೊಂಡಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಅತ್ತಿಬೈಲು ಗ್ರಾಮದ ಕೂಲಿ ಕಾರ್ಮಿಕರಾದ ಗುತ್ಯಪ್ಪ (50) ಮತ್ತು ದುರ್ಗಮ್ಮ (53) ಮೃತರು. ಜಯಮ್ಮ, ಲೋಕಮ್ಮ, ಮಂಜಮ್ಮ, ನೀಲಪ್ಪ, ಕರಿಯಮ್ಮ, ಕಲ್ಪನಾ, ದುರ್ಗಮ್ಮ, ಕರಿಬಸಪ್ಪ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪ ಗ್ರಾಮದಲ್ಲಿ ಮೆಕ್ಕೆಜೋಳದ ತೆನೆ ಮುರಿಯುವ ಕೆಲಸಕ್ಕಾಗಿ ಅತ್ತಿಬೈಲಿನಿಂದ ಹೋಗುವಾಗ ಈ ಅವಘಡ ನಡೆದಿದೆ.
ಟ್ರ್ಯಾಕ್ಟರ್ ಚಾಲಕನ ವಿರುದ್ಧ ಮೃತರ ಸಂಬಂಧಿ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಇನ್‌ಸ್ಪೆಕ್ಟರ್ ಎನ್.ಎಸ್.ರವಿ ತಿಳಿಸಿದ್ದಾರೆ.



