ಸಾಗರ | ಆತ್ಮಹತ್ಯೆಗೆ ಯತ್ನಿಸಿದ್ದ ಸ್ಟಾಫ್ ನರ್ಸ್ ಸಾವು

ಶಿವಮೊಗ್ಗ

ಸಾಗರ, ಮಾ.29ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಡಯಾಗ್ನೋಸ್ಟಿಕ್ ಕೇಂದ್ರದ ಸ್ಟಾಫ್ ನರ್ಸ್ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಗ್ಗೆ ಮೃತಪಟ್ಟಿರುವ ಘಟನೆ ನಡೆದಿದೆ.

ಶ್ವೇತಾ (30), ಮೃತ ಮಹಿಳೆ. ಮಾ.29ರಂದು ಸೊರಬ ತಾಲ್ಲೂಕಿನ ಉಳವಿಯ ತನ್ನ ಪತಿ ಮನೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಗಾಯಾಳು ಶ್ವೇತಾ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.90ರಷ್ಟು ಸುಟ್ಟಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಶ್ವೇತಾ ಚಿಕಿತ್ಸೆ ಫಲಿಸದೇ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಸೊರಬ ತಾಲ್ಲೂಕಿನ ಉಳವಿಯ ನಿವಾಸಿಯಾಗಿದ್ದ ಶ್ವೇತಾ ಅದೇ ಊರಿನ ನವೀನ್ ಎಂಬುವವರೊಂದಿಗೆ ಕಳೆದ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು.ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗು ಸಹ ಇದೆ. ಶ್ವೇತಾ ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದ್ದು,ತನ್ನ ಅತ್ತೆಯ ಮನೆಯ ಹಿಂಭಾಗದಲ್ಲೇ ಈ ದಂಪತಿಗಳು ವಾಸವಿದ್ದರು.

ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆಗೆ ಕೌಟುಂಬಿಕ ಸಮಸ್ಯೆಗಳೇ ಕಾರಣ ಎನ್ನಲಾಗುತ್ತಿದೆ. ಕುಟುಂಬದಲ್ಲಿ ಉಂಟಾದ ಮನಸ್ತಾಪ ಶ್ವೇತಾ ಈ ನಿರ್ಧಾರ ತೆಗೆದುಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಮೃತಳ ಪಾರ್ಥೀವ ಶರೀರ ಇಂದು ಸಂಜೆ ಹುಟ್ಟೂರು ಉಳವಿಗೆ ತಲುಪಲಿದೆ.ಈ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಮ್ಯಾನೇಜರ್, ಶ್ವೇತಾ ನಮ್ಮ ಸಂಸ್ಥೆಯಲ್ಲಿ ಕಳೆದ ಆರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ನರ್ಸಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದ್ದರು.

ಐದಾರು ಭಾಷೆ ತಿಳಿದಿದ್ದ ಇವರು ಸ್ಕ್ಯಾನಿಂಗ್ ಕೇಂದ್ರಕ್ಕೆ ಬರುವ ರೋಗಿಗಳೊಂದಿಗೆ ಹಾಗೂ ಅವರ ಸಂಬಂಧಿಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು.

ಸಹದ್ಯೋಗಿಯ ಅಗಲುವಿಕೆಯಿಂದ ನಾವೆಲ್ಲರೂ ದುಃಖಿತರಾಗಿದ್ದೇವೆ ಎಂದು ತುಂಬಾ ನೋವಿನಿಂದ ಸಂತಾಪ ಸೂಚಿಸಿದರು.

Author