ತೀರ್ಥಹಳ್ಳಿ | ನಿಯಂತ್ರಣ ತಪ್ಪಿ ಪಲ್ಟಿಯಾದ ಅಡಿಕೆ ಲಾರಿ, ಚಾಲಕನ ನೆರವಿಗೆ ಧಾವಿಸಿದ ಶಾಸಕ ಆರಗ ಜ್ಞಾನೇಂದ್ರ

ಶಿವಮೊಗ್ಗ

ತೀರ್ಥಹಳ್ಳಿ-ಕೋಣಂದೂರು-ಅನಂತಪುರ ಮಾರ್ಗದ ಹಿರೇಸರ ಸಮೀಪ ಶನಿವಾರ ರಸ್ತೆಯಲ್ಲಿ ಬೃಹತ್ ಕಾಳಿಂಗ ಸರ್ಪ ಅಡ್ಡ ಬಂದ ಪರಿಣಾಮ, ಚಾಲಿ ಅಡಿಕೆ ತುಂಬಿದ್ದ ವಾಹನವೊಂದು ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.

ಸಾಗರದಿಂದ ಕಾರ್ಕಳದತ್ತ ಸಾಗುತ್ತಿದ್ದ ಈ ವಾಹನಕ್ಕೆ ಗುಡ್ಡೆಕೊಪ್ಪ ಸಮೀಪದ ಹಿರೇಸರದಲ್ಲಿ ಇದ್ದಕ್ಕಿದ್ದಂತೆ ಕಾಳಿಂಗ ಸರ್ಪ ಎದುರಾಗಿದೆ. ಹಾವನ್ನು ಕಂಡು ಆತಂಕಗೊಂಡ ಚಾಲಕ, ಹಾವಿನ ಜೀವ ಉಳಿಸುವ ಧಾವಂತದಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ್ದಾರೆ.

ಈ ವೇಳೆ ಭಾರೀ ಪ್ರಮಾಣದ ಅಡಿಕೆ ಲೋಡ್ ಹೊಂದಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಅದೇ ಸಮಯದಲ್ಲಿ ಕಾರ್ಯನಿಮಿತ್ತ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಶಾಸಕ ಆರಗ ಜ್ಞಾನೇಂದ್ರ ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಸ್ಥಳಕ್ಕೆ ಧಾವಿಸಿದರು.

ಅಪಘಾತದ ತೀವ್ರತೆ ಕಂಡು ಆತಂಕಗೊಂಡಿದ್ದ ಲಾರಿ ಚಾಲಕನನ್ನು ಮಾತನಾಡಿಸಿದ ಶಾಸಕರು, ಅವರಿಗೆ ಯಾವುದೇ ಗಾಯಗಳಾಗದಿರುವುದನ್ನು ಖಚಿತಪಡಿಸಿಕೊಂಡು ಧೈರ್ಯ ತುಂಬಿದರು.

ಅದೃಷ್ಟವಶಾತ್​​ ಈ ಘಟನೆಯಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಕಾಳಿಂಗ ಸರ್ಪಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

Author