ಉತ್ತರ ಕನ್ನಡ | ಮಕ್ಕಳಲ್ಲಿ ವಿಜ್ಞಾನ ತಂತ್ರಜ್ಞಾನದ ಅರಿವು ಮೂಡಿಸಬೇಕಿದೆ : ಇಸ್ರೋ ಮಾಜಿ ಅಧ್ಯಕ್ಷ ಡಾ.‌ಕಿರಣ್ ಕುಮಾರ್

ಉತ್ತರ ಕನ್ನಡ

‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ 2026’ ಉದ್ಘಾಟನೆ

ಹೊನ್ನಾವರ, ಪ್ರತಿಯೊಂದು ಮಾನವನ ದೈನಂದಿನ ಬದುಕಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಅತ್ಯಗತ್ಯವಾಗಿದ್ದು ವಿಜ್ಞಾನ ತಂತ್ರಜ್ಞಾನ ಹೊರತುಪಡಿಸಿದ ಜೀವನವನ್ನು ಊಹಿಸಲೂ ಅಸಾಧ್ಯವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದರು.

ಅವರು ಉತ್ತರ‌ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಕ್ಷೇತ್ರ ಬಂಗಾರಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನದಿಂದ ನಡೆಯುತ್ತಿರುವ ಸಂಸ್ಕೃತಿ ಕುಂಭ – ಮಲೆನಾಡ ಉತ್ಸವ – 2026 ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಬಳಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ದೇಶ ಸ್ವತಂತ್ರಗೊಂಡ ಬಳಿಕ ವಿಜ್ಞಾನ ತಂತ್ರಜ್ಞಾನದ ಕಡೆಗೆ ಗಮನ ಹರಿಸುವುದಕ್ಕಿಂತ ದೇಶದ ಮೂಲ ಸೌಕರ್ಯಗಳ ಅಭಿವೃದ್ಧಿ, ಬಡತನ ನಿವಾರಣೆ, ಜನರ ಜೀವನ ಮಟ್ಟ ಸುಧಾರಿಸುವ ಸವಾಲುಗಳು ಹೆಚ್ಚಿದ್ದವು. ಆದರೂ ದೇಶದ ವಿಜ್ಞಾನಿಗಳ ಪ್ರಯತ್ನದಿಂದ ದೇಶವು ಅಲ್ಪಾವಧಿಯಲ್ಲಿಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿವೆ. ಇತ್ತೀಚೆಗೆ ಬಾಹ್ಯಾಕಾಶದಲ್ಲಿ ದೇಶದ ಸಾಧನೆ ವಿಶ್ವದ ಗಮನ ಸೆಳೆಯುತ್ತಿದೆ ಎಂದು ಅವರು ಶ್ಲಾಘಿಸಿದರು.

ಇಂದು ಪ್ರತಿಯೊಬ್ಬನ ಜೀವನ ವಿಜ್ಞಾನ ತಂತ್ರಜ್ಞಾನವನ್ನು ಅವಲಂಭಿಸಿದೆ. ವಿಜ್ಞಾನ ತಂತ್ರಜ್ಞಾನ ಹೊರತು ಜೀವನವೇ ಇಲ್ಲ ಎಂಬಂತಾಗಿದೆ. ದೇಶದಲ್ಲಿ ವಿಜ್ಞಾನ ತಂತ್ರಜ್ಞಾನದಲ್ಲಿ ಇನ್ನಷ್ಟು ಹೊಸ ಅವಿಷ್ಕಾರಗಳು ನಡೆಯಬೇಕಿದೆ. ಅದಕ್ಕಾಗಿ ಮಕ್ಕಳಲ್ಲಿ ವಿಜ್ಞಾನ ತಂತ್ರಜ್ಞಾನದ ಮೇಲಿನ ಆಸಕ್ತಿಯನ್ನು ಹೆಚ್ಚಿಸಿದಾಗ ಮುಂದೆ ಹೊಸ ಹೊಸ ಅವಿಷ್ಕಾರಗಳಿಗೆ ನಾಂದಿಯಾಗುತ್ತದೆ ಎಂದು ಅವರು ಹೇಳಿದರು.

ಶ್ರೀ ಮಾರುತಿ ಗುರೂಜಿ ಅವರು ಬಂಗಾರಮಕ್ಕಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಧ್ಯಾತ್ಮಿಕ ಜಾಗೃತಿ ಬೆಳೆಸಿದ್ದಾರೆ. ಆಧ್ಯಾತ್ಮಿಕತೆಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿರುವ ಗುರೂಜಿಯವರ ಸೇವೆಯು ಇಡೀ ದೇಶಕ್ಕೇ ಮಾದರಿಯಾಗಿದೆ. ಎರಡು ದಶಕಗಳಿಂದ ನಡೆಸುತ್ತಿರುವ ‘ಸಂಸ್ಕೃತಿ ಕುಂಭ – ಮಲೆನಾಡ ಉತ್ಸವʼಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ವಿಜ್ಞಾನ ತಂತ್ರಜ್ಞಾನದ ಬಗ್ಗೆ ಗ್ರಾಮೀಣ ಮಕ್ಕಳಲ್ಲಿ ಅರಿವು ಮತ್ತು ಆಸಕ್ತಿ ಮೂಡಿಸುತ್ತಿರುವುದು ಮಾರುತಿ ಗುರೂಜಿಯವರಲ್ಲಿ ಅಡಗಿರುವ ದೂರ ದೃಷ್ಟಿಯ ಸಂಕೇತವಾಗಿದೆ. ಈ ಕಾರ್ಯಗಳು ಶ್ರೀ ಕ್ಷೇತ್ರದ ಮೂಲಕ ಇನ್ನಷ್ಟು ಉತ್ತಮವಾಗಿ ಹಾಗೂ ಯಶಸ್ವಿಯಾಗಿ ನೆರವೇರಲಿ ಎಂದು ವಿಜ್ಞಾನಿ ಕಿರಣ್ ಕುಮಾರ್ ಶುಭ ಹಾರೈಸಿದರು.

ಮಾಜಿ ಶಾಸಕ ಸುನಿಲ್‌ ನಾಯ್ಕ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜನ ವಿರೋಧಿ ಮಾತ್ರವಲ್ಲದೆ ಪಶ್ಚಿಮ ಘಟ್ಟಕ್ಕೆ ಮಾರಕವಾಗಿದೆ. ಇದರ ವಿರುದ್ಧ ಮಾರುತಿ ಗುರೂಜಿ ಅವರು ಗಟ್ಟಿ ಧ್ವನಿಯಾಗಿದ್ದಾರೆ. ಈ ಮೂಲಕ ಹೋರಾಟಕ್ಕೆ ಅವರು ಶಕ್ತಿ ತುಂಬಿದ್ದಾರೆ. ಕ್ಷೇತ್ರವನ್ನು ಕೇವಲ ಧಾರ್ಮಿಕ ಆಚರಣೆ ಮತ್ತು ಜಾತ್ರೆಗೆ ಸೀಮಿತಗೊಳಿಸದೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವುದು ಸಮಾಜಕ್ಕೆ ಮಾದರಿಯಾಗಿದ ರೂಪಿಸಿದ್ದಾರೆ.

ಮಾರುತಿ ಗುರೂಜಿ ಅವರ ಈ ಕೆಲಸ ಕಾರ್ಯದಲ್ಲಿ ಈ ಊರಿನ ಪರ ಊರಿನ ಜನತೆ ಕೈ ಜೋಡಿಸಬೇಕು ಎಂದು ಹೇಳಿದರು. ಬೆಂಗಳೂರು ಶ್ರೀ ಸಹಸ್ರಾರ ಯೋಗೀಶ್ವರ ಸ್ವಾಮಿ ಮಹಾಪೀಠಂ ಇದರ ಶ್ರೀಮತ್‌ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ಶ್ರೀ ಶ್ರೀ ಯೋಗೀಶ್ವರ ಮಹಾಸ್ವಾಮಿ ಉಪದೇಶ ನೀಡಿ, ನಾನು ನನ್ನದು ಎಂಬ ಪದ ಮಾರಕವಾಗಿದೆ. ನಾವು ನಮ್ಮದು ಎಂಬ ಕಲ್ಪನೆ ಜನರಲ್ಲಿ ಮೂಡಬೇಕು. ಹೀಗಾದಾಗ ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯವಾಗುತ್ತದೆ. ಅನ್ನದಾನ, ವಿದ್ಯಾದಾನ ಸಹಿತ ಹತ್ತಾರು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಈ ಕ್ಷೇತ್ರದೊಂದಿಗೆ ನಾವೆಲ್ಲರೂ ಜೊತೆಗೂಡಬೇಕು ಎಂದು ಹೇಳಿದರು.

ಶ್ರೀ ಕ್ಷೇತ್ರ ಬಂಗಾರಮಕ್ಕಿ ಧರ್ಮಾಧಿಕಾರಿಗಳಾದ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ದಿವ್ಯ ಸಾನಿಧ್ಯ ವಹಿಸಿದ್ದರು.ಉದ್ಯಮಿ ಮಾಸ್ತಪ್ಪ ನಾಯ್ಕ, ಸಂಗೀತ ಸಂಯೋಜಕರಾದ ಸಂವತ್ಸರ, ನಗರ ಬಸ್ತಿಕೇರಿ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷೆ ಸುನೀತಾ ಹೆಗಡೆ, ಮಾಜಿ ಸದಸ್ಯ ಮಹೇಶ ನಾಯ್ಕ, ಹೊನ್ನಾವರ ಮಂಡಳ ಬಿಜೆಪಿ ಅಧ್ಯಕ್ಷ ಮಂಜುನಾಥ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಾತನಾಡಿದರು.

ತೃಪ್ತಿ ಮತ್ತು ಪಾವಣಿ ಪ್ರಾರ್ಥನೆಗೈದರು. ಶ್ರೀ ಮಾರುತಿ ವಸತಿ ಪಿಯು ಕಾಲೇಜಿನ ಶಿಕ್ಷಕಿಯರು ನಾಡಗೀತೆ ಹಾಡಿದರು. ನೂರ್ ಅಹ್ಮದ್ ಸ್ವಾಗತಿಸಿ ಪ್ರಸ್ತಾವನೆಗೈದರು. ಗಣಪತಿ ಹೆಗಡೆ ಧನ್ಯವಾದಗೈದರು. ಶೈಲೇಶ್, ಸೌಮ್ಯ, ತೃಪ್ತಿ ಧನ್ಯವಾದ ಸಲ್ಲಿಸಿದರು.

Author