ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ತೀರ್ಪು! ಮತಾಂತರವಾದರೆ ಎಸ್‌ಸಿ ಮೀಸಲಾತಿ ರದ್ದು

ದೇಶ

ನವದೆಹಲಿ: ಪರಿಶಿಷ್ಟ ಜಾತಿ (SC) ಸಂವಿಧಾನಬದ್ಧ ಸೌಲಭ್ಯಗಳು ಮತ್ತು ರಕ್ಷಣೆಯ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗಳು ಎಸ್‌ಸಿ (SC Reservation) ಸ್ಥಾನಮಾನವನ್ನು ಪಡೆಯಲು ಅರ್ಹರಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಅಲ್ಲದೆ, ಅಂತಹ ವ್ಯಕ್ತಿಗಳು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ’ಯಡಿ ರಕ್ಷಣೆ ಪಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ನ್ಯಾಯಮೂರ್ತಿಗಳಾದ ಪಿ.ಕೆ. ಮಿಶ್ರಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಚಿಂತಾಡ ಆನಂದ್ ಎಂಬುವವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಾಲಯ, “ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮದ ಹೊರತಾದ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ. ಮತಾಂತರವು ಎಸ್‌ಸಿ ಸ್ಥಾನಮಾನದ ನಷ್ಟಕ್ಕೆ ಕಾರಣವಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದೆ.

ಪಾದ್ರಿಯಾಗಿ ಕೆಲಸ ಮಾಡುತ್ತಿದ್ದ ಆನಂದ್, ತಮ್ಮ ಮೇಲೆ ಕೆಲವರು ಜಾತಿ ನಿಂದನೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆದರೆ, ಆರೋಪಿಗಳು ಆನಂದ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವುದರಿಂದ ಅವರು ಎಸ್‌ಸಿ ಸೌಲಭ್ಯ ಪಡೆಯಲು ಅರ್ಹರಲ್ಲ ಎಂದು ವಾದಿಸಿದ್ದರು.

ಆಂಧ್ರಪ್ರದೇಶ ಹೈಕೋರ್ಟ್ ಆನಂದ್ ಅವರ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು. ಇದರ ವಿರುದ್ಧ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಈ ತೀರ್ಪು ಮತಾಂತರ ಮತ್ತು ಮೀಸಲಾತಿ ಹಕ್ಕುಗಳ ನಡುವಿನ ಕಾನೂನು ಸಂಘರ್ಷಕ್ಕೆ ಸ್ಪಷ್ಟವಾದ ದಿಕ್ಕನ್ನು ನೀಡಿದೆ. ಸಂವಿಧಾನದ ಪ್ರಕಾರ ಸಿಗುವ ಸುರಕ್ಷತೆಗಳು ಕೇವಲ ನಿಗದಿತ ಧರ್ಮದ ಅಡಿಯಲ್ಲಿ ಬರುವ ಸಮುದಾಯಗಳಿಗೆ ಮಾತ್ರ ಎಂಬ ಕಾನೂನು ನಿಲುವನ್ನು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

Author