ಸಾಗರ, ಇಲ್ಲಿನ ಇತಿಹಾಸ ಪ್ರಸಿದ್ದವಾದ ಶ್ರೀ ಮಹಾಗಣಪತಿ ರಥೋತ್ಸವ ಭಾನುವಾರ ಬೆಳಿಗ್ಗೆ 8-15ರ ಶುಭ ಮಹೂರ್ತದಲ್ಲಿ ಸಂಪನ್ನಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಜಗದೀಶ್ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ಶ್ರೀ ಗಣಪತಿ ದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ನಂತರ ಶ್ರೀ ದೇವರ ರಥರೋಹಣ ನಡೆಯಿತು. ಮಂಗಳಾರತಿ ನಂತರ ಕನಕವೃಷ್ಟಿ ನಡೆದು ರಥವನ್ನು ಎಳೆಯಲಾಯಿತು.
ಯುದ್ದ ನಿಂತು ಶಾಂತಿ ನೆಲೆಸಲಿ :
ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಇತಿಹಾಸ ಪ್ರಸಿದ್ದವಾದ ಗಣಪತಿ ರಥೋತ್ಸವ ಯಶಸ್ವಿಯಾಗಿ ನಡೆದಿದೆ. ಜಾತ್ರೆ ಯಶಸ್ಸಿಗೆ ಬೇಕಾದ ಅಗತ್ಯ ಸಿದ್ದತೆ ಮಾಡಿಕೊಡಲಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದಾರೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅತ್ಯಂತ ಅಚ್ಚುಕಟ್ಟಾಗಿ ಜಾತ್ರೋತ್ಸವಕ್ಕೆ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು.
ಪ್ರಪಂಚದಲ್ಲಿ ಯುದ್ದದ ವಾತಾವರಣ ಕವಿದಿದ್ದು, ಇರಾನ್, ಇಸ್ರೇಲ್ ಮತ್ತು ಅಮೇರಿಕಾ ನಡುವಿನ ಯುದ್ದ ಜಾಗತಿಕ ಶಾಂತಿಗೆ ಧಕ್ಕೆಯುಂಟು ಮಾಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದಿಂದ ಭಾರತದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ.
ಆದಷ್ಟು ಬೇಗ ಯುದ್ದ ಮುಗಿದು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ಗಣಪತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಟಿ.ವಿ.ಪಾಂಡುರಂಗ ಮಾತನಾಡಿ, ಗಣಪತಿ ಜಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದ್ದು, ಶಾಸಕರ ನೇತೃತ್ವದಲ್ಲಿ ಜಾತ್ರೆ ಯಶಸ್ಸಿಗೆ ಎಲ್ಲ ಸಿದ್ದತೆ ಮಾಡಿಕೊಂಡಿದೆ.
ರಥೋತ್ಸವ ಅಂಗವಾಗಿ ಪ್ರತಿದಿನ ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ. ಸೋಮವಾರದಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದ್ದು, ಬುಧವಾರ ಸಾರ್ವತ್ರಿಕ ಗಣಹೋಮ ಏರ್ಪಡಿಸಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮಿಳಾ ಕುಮಾರಿ,ದೇವಸ್ಥಾನ ಸಮಿತಿ ಸದಸ್ಯರು, ವಿವಿಧ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.



