ಶಿಕಾರಿಪುರದಲ್ಲಿ ಚಿರತೆ ದಾಳಿ!

ಶಿವಮೊಗ್ಗ

ಶಿಕಾರಿಪುರ,ಒಂದೇ ದಿನ ಮೂವರು ಗ್ರಾಮಸ್ಥರ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಶಿಕಾರಿಪುರ ತಾಲೂಕಿನ ತಡಸನಹಳ್ಳಿ, ಅಡಗಂಟಿ ಹಾಗೂ ಮುತ್ತಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಮಾರ್ಚ್ 21 ರಂದು ನಡೆದಿದೆ.

ಘಟನೆಯಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮತ್ತೋರ್ವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಎಲ್ಲೆಲ್ಲೆ ದಾಳಿ? :

ತಡಸನಹಳ್ಳಿ ಗ್ರಾಮದ ಮುತ್ತಣ್ಣ ಎಂಬವರು ಎಂದಿನಂತೆ ಬೆಳಿಗ್ಗೆ ಗದ್ದೆಗೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಚಿರತೆ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದೆ. ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ .

ಅಡಗಂಟಿ ಗ್ರಾಮದ ಸುದೀಪ್ ಎಂಬವರು ಸಂಜೆ ವೇಳೆ, ಮುತ್ತಗಿ ಗ್ರಾಮ ಸಮೀಪದ ಮೆಕ್ಕೆಜೋಳದ ಜಮೀನಿನಲ್ಲಿ, ಜಾನುವಾರುಗಳಿಗೆ ಮೇವು ತರಲು ತೆರಳಿದ್ದರು. ಈ ವೇಳೆ ಇವರ ಮೇಲೆ ಚಿರತೆ ದಾಳಿ ನಡೆಸಿ, ಗಾಯಗೊಳಿಸಿದೆ. ಇವರನ್ನು ಕೂಡ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದಂತೆ ಶನಿವಾರ ಸಂಜೆ ತಡಸನಹಳ್ಳಿ, ಅಡಗಂಟಿ ಗ್ರಾಮದ ನಡುವಿನ ಮುಖ್ಯರಸ್ತೆಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಹೂವ್ಯನಾಯ್ಕ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದೆ.

ಹೂವ್ಯನಾಯ್ಕ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ ಎಂಬ ಮಾಹಿತಿಯಾಗಿದೆ .

ಕಾರ್ಯಾಚರಣೆ :

ಚಿರತೆ ದಾಳಿಯಿಂದ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಿತರಾಗಿದ್ದಾರೆ. ಜಮೀನುಗಳಿಗೆ ಹೋಗಲು ಭಯ ಪಡುತ್ತಿದ್ದಾರೆ.

ಅರಣ್ಯ ಇಲಾಖೆಯು ಚಿರತೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಾಗೆಯೇ ತಡಸನಹಳ್ಳಿ, ಮುತ್ತಗಿ ಕಿರು ಅರಣ್ಯ ಸೇರಿದಂತೆ ಮೂರು ಕಡೆ ಚಿರತೆ ಸೆರೆಗೆ ಬೋನು ಇರಿಸಿದ್ದಾರೆ ಎಂದು ತಿಳಿದುಬಂದಿದೆ.

Author