ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಶಾಮನೂರು ಕುಟುಂಬದ ಕುಡಿ ಕಣಕ್ಕೆ ಇಳಿದಿದೆ. ಅಧಿಕೃತವಾಗಿ ಕಾಂಗ್ರೆಸ್ ಟಿಕೆಟ್ ಘೋಷಣೆ ಮುನ್ನವೇ ಇಂದು ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದ್ದಾರೆ.
ತಾತನ ಕಾರಲ್ಲೇ ನಾಮಪತ್ರ ಸಲ್ಲಿಸಲು ಬಂದ ಮೊಮ್ಮಗ:
ದಾವಣಗೆರೆ ದಕ್ಷಿಣ ಕ್ಷೇತ್ರ ಪ್ರತಿನಿಧಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯ ನಂತರ ಕಳೆದ 5 ತಿಂಗಳಿನಿಂದ ನಿಂತಲ್ಲೇ ನಿಂತಿದ್ದ ಶಿವಶಂಕರಪ್ಪ ಅವರ ಕಾರಿನಲ್ಲೇ ಇಂದು ನಾಮಪತ್ರ ಸಲ್ಲಿಸಲು ಸಮರ್ಥ್ ತಮ್ಮ ತಾಯಿ ಜೊತೆ ಪಾಲಿಕೆ ಕಚೇರಿಗೆ ಆಗಮಿಸಿದರು.
ತಾತನ ಕಾರನ್ನು ಸ್ವಚ್ಛಗೊಳಿಸಿ ಪೂಜೆ ಮಾಡಿ, ಅದೇ ಕಾರಿನಲ್ಲಿ ಶುಭಗಳಿಗೆಯಲ್ಲಿ ತಾಯಿ ಪ್ರಭಾ ಮಲ್ಲಿಕಾರ್ಜುನ ಅವರ ಜೊತೆಗೆ ಅಜ್ಜಿ ಮನೆಗೆ ತೆರಳಿ ಅಜ್ಜಿಯ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ನೇರವಾಗಿ ಮಹಾನಗರ ಪಾಲಿಕೆ ಆವರಣದಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ, ಎಸಿ ಹಾಗೂ ಚುನಾವಣಾಧಿಕಾರಿ ಸಂತೋಷ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಕಟ್ಟಿರುವುದೇ ಅಪ್ಪಾಜಿ, ಕಾಂಗ್ರೆಸ್ನಿಂದಲೇ ನಾಮಪತ್ರ ಸಲ್ಲಿಕೆ:
ತಾಯಿ ಪ್ರಭಾ ಮಲ್ಲಿಕಾರ್ಜುನ್ ಜೊತೆ ಸಮರ್ಥ್ ಶಾಮನೂರು ಅವರು ಅಪ್ಪಟ ದೇಸಿ ಸಾಂಪ್ರದಾಯಿಕ ಉಡುಗೆಯಲ್ಲಿ ನಾಮಪತ್ರ ಸಲ್ಲಿಸಲು ಹೊರಡುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದರು. ಬಿ ಫಾರಂ ಸಿಗುವ ಭರವಸೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ.
ಕಾಂಗ್ರೆಸ್ ಕಟ್ಟಿರುವುದೇ ಅಪ್ಪಾಜಿ ಶಾಮನೂರು ಅವರು. ಹೀಗಾಗಿ ನಾನು ಕಾಂಗ್ರೆಸ್ ನಿಂದಲೇ ನಾಮಪತ್ರ ಸಲ್ಲಿಸುತ್ತಿರುವೆ ಎಂದರು. ಅಲ್ಪಸಂಖ್ಯಾತರು ಸೇರಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಾಗುವುದು. ಕ್ಷೇತ್ರದಲ್ಲಿ ತಾತನಂತೆಯೇ ನಾನು ಸೇವೆ ಸಲ್ಲಿಸುತ್ತೇನೆ.
ಬಿ ಫಾರಂ ಸಿಕ್ಕ ತಕ್ಷಣ ಸೋಮವಾರ ಅಧಿಕೃತವಾಗಿ ರಾಜ್ಯ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ ಎಂದು ತಿಳಿಸಿದರು.
ಸಂಸದೆ ಪ್ರಭಾ ಮಲ್ಲಿಕಾರ್ಜುನ ಪ್ರತಿಕ್ರಿಯೆ
ಸಂಸದೆ ಪ್ರಭಾ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, “ಇವತ್ತು ಶುಭ ಮುಹೂರ್ತ ಇದೆ. ಒಂದು ನಾಮಪತ್ರ ಸಾಂಕೇತಿಕವಾಗಿ ಸಲ್ಲಿಸುತ್ತಿದ್ದೇವೆ. ಅಧಿಕೃತವಾಗಿ ಪಕ್ಷದ ಬಿ ಫಾರಂ ಜೊತೆ ಸೋಮವಾರ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಶಾಮನೂರು ಅವರು ಮಾಡಿದ ಕೆಲಸ ನಮಗೆ ಶ್ರೀರಕ್ಷೆ ಆಗಲಿದೆ.
ಈಗ ಯುವಕರು ರಾಜಕೀಯಕ್ಕೆ ಬರಬೇಕು. ಜಾಗತಿಕ ಮಟ್ಟದಲ್ಲಿ ಅವರದೇ ಆದ ದೃಷ್ಟಿಕೋನ ಇರುತ್ತೆ ಎಂದು ಮಗನ ಸ್ಪರ್ಧೆ ಬಗ್ಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಸಮರ್ಥ್ ಪ್ರತಿ ಬಾರಿ ನಾಮಪತ್ರ ಸಲಿಸುವ ವೇಳೆ ಕುರುಬರು ಹಾಗೂ ಅಲ್ಪಸಂಖ್ಯಾತ ಸಮುದಾಯ ಮುಖಂಡರ ಜೊತೆ ಶಾಮನೂರು ಶಿವಶಂಕರಪ್ಪ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದರು. ಅದೇ ರೀತಿ ಮೊಮ್ಮಗ ಸಮರ್ಥ್ ಕೂಡ ತಾತನ ಸಂಪ್ರದಾಯ ಮುಂದುವರಿಸಿದರು.
ತಾಯಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಕುರುಬ ಸಮುದಾಯದ ಗೋಣ್ಯಪ್ಪ , ಅಲ್ಪಸಂಖ್ಯಾತ ಸಮುದಾಯದ ಸಲೀಂ ಅಹಮ್ಮದ್ ಎಂಬುವರ ನೇತೃತ್ವದಲ್ಲಿ ಸಮರ್ಥ್ ನಾಮಪತ್ರ ಸಲ್ಲಿಸಿದರು.



