ಆಟವಾಡುತ್ತಾ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ ; ಪ್ರಾಣದ ಹಂಗುತೊರೆದು ಮಗುವನ್ನು ರಕ್ಷಿಸಿದ ಆಪದ್ಬಾಂಧವ

ಉತ್ತರ ಕನ್ನಡ

ಶಿರಸಿ, ನಗರದ ಕಸ್ತೂರಬಾ ನಗರದಲ್ಲಿ ಸೋಮವಾರ ಮಧ್ಯಾಹ್ನ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಆಕಸ್ಮಿಕವಾಗಿ ಮನೆಯ ಹಿಂದಿದ್ದ ಆಳವಾದ ಬಾವಿಗೆ ಬಿದ್ದಿದ್ದು,ವ್ಯಕ್ತಿಯೋರ್ವರು ತನ್ನ ಪ್ರಾಣದ ಹಂಗುತೊರೆದು ಮಗುವನ್ನು ರಕ್ಷಿಸಿದ ಎದೆ ಝಲ್ಲೆನಿಸುವ ಘಟನೆ ನಡೆದಿದೆ.

ಯಮನ ಪಾಶದಿಂದ ಪಾರಾಗಿ ಬಂದ ಪುಟ್ಟ ಬಾಲಕಿಯನ್ನು ‘ಭುವಿ’ ಎಂದು ಗುರುತಿಸಲಾಗಿದ್ದು, ಆಕೆಗೆ ಮರುಜೀವ ನೀಡಿದ ಸಾಹಸಿಯನ್ನು ಸ್ಥಳೀಯ ಸಾರಿಕಾ ಟ್ರಸ್ಟ್‌ನ ಸಂಸ್ಥಾಪಕ ಪಯ್ಯು ಚೌಟಿ ಎಂದು ಗುರುತಿಸಲಾಗಿದೆ.

ಮನೆಯ ಹೊರಗೆ ಆಟವಾಡುತ್ತಿದ್ದ ಭುವಿಗೆ ಊಟ ತರಲೆಂದು ಅಜ್ಜಿ ಒಳಗೆ ಹೋದ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿದೆ. ಅಜ್ಜಿ ಹೊರಬಂದು ನೋಡುವಷ್ಟರಲ್ಲಿ ಮಗು ನಾಪತ್ತೆಯಾಗಿದ್ದಳು.

ಗಾಬರಿಯಿಂದ ಮನೆಯೊಳಗೆಲ್ಲಾ ಹುಡುಕಿದರೂ ಮಗು ಸಿಗಲಿಲ್ಲ. ಕೊನೆಗೆ ಅನುಮಾನಗೊಂಡು ಮನೆಯ ಹಿಂದಿನ ಬಾವಿಯ ಬಳಿ ಹೋಗಿ ಇಣುಕಿ ನೋಡಿದಾಗ, ಬಾವಿಯೊಳಗಿನಿಂದ ಮಗುವಿನ ಅಳುವಿನ ಶಬ್ದ ಕೇಳಿಸಿದೆ.

ಪುಟ್ಟ ಭುವಿ ಬಾವಿಯಲ್ಲಿದ್ದ ನೀರಿನ ಪಂಪ್‌ನ ಪೈಪ್‌ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ನೀರಿನ ಮೇಲೆ ಒದ್ದಾಡುತ್ತಾ ಅಳುತ್ತಿದ್ದಳು.ಅಜ್ಜಿಯ ಕೂಗಾಟ ಕೇಳಿ ತಕ್ಷಣವೇ ಅಕ್ಕಪಕ್ಕದವರು ಓಡಿಬಂದಿದ್ದಾರೆ.

ಈ ಆತಂಕದ ಸುದ್ದಿ ಹತ್ತಿರದಲ್ಲೇ ವಾಸವಿದ್ದ ಪಯ್ಯು ಚೌಟಿ ಅವರಿಗೂ ತಲುಪಿದೆ. ಆಗಷ್ಟೇ ಬೆಂಗಳೂರಿಗೆ ಹೊರಡಲು ಸಿದ್ಧರಾಗಿದ್ದ ಅವರು, ವಿಷಯ ತಿಳಿದ ಕೂಡಲೇ ಒಂದು ಕ್ಷಣವೂ ತಡಮಾಡದೆ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಸ್ಥಳೀಯರ ನೆರವಿನೊಂದಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಆಳವಾದ ಬಾವಿಗಿಳಿದ ಅವರು, ಸರಿಸುಮಾರು ಅರ್ಧ ಗಂಟೆಯ ಸತತ ಕಾರ್ಯಾಚರಣೆಯ ನಂತರ ಮಗುವನ್ನು ಜೀವಂತವಾಗಿ ಹಾಗೂ ಸುರಕ್ಷಿತವಾಗಿ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಮಗು ಬಾವಿಗೆ ಬಿದ್ದ ಐದೇ ನಿಮಿಷದಲ್ಲಿ ಪತ್ತೆಯಾದರೂ, ಹಗ್ಗ ಮತ್ತು ಇತರೆ ವ್ಯವಸ್ಥೆ ಮಾಡಿ ಆಕೆಯನ್ನು ಮೇಲಕ್ಕೆ ತರಲು ಸಾಕಷ್ಟು ಸಮಯ ಹಿಡಿದಿತ್ತು ಎನ್ನಲಾಗಿದೆ.

Author