ಶಿವಮೊಗ್ಗ,ಅಡುಗೆ ಅನಿಲ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯು ಇಂದು ನಗರದ ಗೋಪಿ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿತು.
ರಸ್ತೆ ಮಧ್ಯೆ ಕಟ್ಟಿಗೆ ಬಳಸಿ ಬೆಂಕಿ ಹಚ್ಚಿ ಟೀ ಮಾಡುವ ಮೂಲಕ ಅಡುಗೆ ಅನಿಲದ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ಹೇಗೆ ತಟ್ಟುತ್ತಿದೆ ಎಂಬುದನ್ನು ಪ್ರದರ್ಶಿಸಿದರು ನಂತರ ಪ್ರತಿಭಟನೆಯಲ್ಲಿ ಮೋದಿಯವರ ಮುಖವಾಡ ಧರಿಸಿದ ವ್ಯಕ್ತಿಯ ಕೊರಳಿಗೆ ನಾಯಿಯ ಚೈನ್ ಹಾಕಿ, ಟ್ರಂಪ್ ಮುಖವಾಡ ಧರಿಸಿದ ವ್ಯಕ್ತಿ ಎಳೆದುಕೊಂಡು ಹೋಗುವ ಅಣಕು ಪ್ರದರ್ಶನ ಮಾಡಿ ಟ್ರಂಪ್ ಹೇಳಿದಂತೆ ಮೋದಿ ಕುಣಿಯುತ್ತಿದ್ದಾರೆ ಎಂಬ ವಿಡಂಬನೆಯನ್ನು ಪ್ರತಿಭಟನಾಕಾರರು ಈ ಮೂಲಕ ಬಿಂಬಿಸಿದರು.
ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಬದಲ್ಲಿ ಶಿವಮೊಗ್ಗ ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಮಾತನಾಡಿ ಬಿಜೆಪಿ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ಪ್ರಧಾನಿ ಮೋದಿಯವರು ಡೊನಾಲ್ಡ್ ಟ್ರಂಪ್ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.

ಹಣದುಬ್ಬರ ಮತ್ತು ನಿರುದ್ಯೋಗದಿಂದ ತತ್ತರಿಸಿರುವ ಸಾಮಾನ್ಯ ಜನರು, ದಿನಗೂಲಿ ನೌಕರರು, ರೈತರು ಹಾಗೂ ಮಹಿಳೆಯರಿಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಈ ನಿರ್ಧಾರವನ್ನು ಹಿಂಪಡೆಯುವಂತೆ ಕೇಂದ್ರಕ್ಕೆ ಸೂಚಿಸಬೇಕು, ಇಲ್ಲವೇ ಜನವಿರೋಧಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಕೇಂದ್ರದ ನಿರ್ಧಾರವನ್ನು ವಜಾಗೊಳಿಸುವಂತೆ ಒತ್ತಾಯಿಸಲಾಯಿತು.



