ಶಿವಮೊಗ್ಗ | ಭದ್ರಾಪುರ ಸರ್ಕಾರಿ ಶಾಲೆಯಲ್ಲಿ ಪೋಷಕರ ಸಭೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ

ಶಿವಮೊಗ್ಗ

ಶಿವಮೊಗ್ಗ, ತಾಲೂಕಿನ ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭದ್ರಾಪುರದಲ್ಲಿ ಇಂದು ಪೋಷಕರ ಸಭೆಯೊಂದಿಗೆ ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಮೆಚ್ಚಿದರು.

ಕಾರ್ಯಕ್ರಮದಲ್ಲಿ ಗ್ರಾಮ ಮುಖಂಡರಾದ ಮೈಲಾರಪ್ಪ ಮಾತನಾಡಿ, ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳು ಲಭ್ಯವಿದ್ದು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಸಂಪೂರ್ಣ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದ್ದರಿಂದ ಗ್ರಾಮದಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಗೆ ದಾಖಲಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಶಿಕ್ಷಣ ಪ್ರೇಮಿ ಹನುಮಂತಪ್ಪ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರ ನೀಡುವ ಸಮವಸ್ತ್ರ, ಶೂ ಹಾಗೂ ಸಾಕ್ಸ್ ಧರಿಸಿ ಶಿಸ್ತು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಜೊತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮೊದಲನೇ ತರಗತಿಯಿಂದ ಐದನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ದ್ವಿಭಾಷಾ ತರಗತಿಗಳನ್ನು ಬೋಧಿಸಲು ಅನುಕೂಲವಾಗುವಂತೆ ಶಾಲೆಗೆ ಸ್ಮಾರ್ಟ್ ಟಿವಿ ಒದಗಿಸುವುದಾಗಿ ಭರವಸೆ ನೀಡಿದರು.

ನಿಕಟಪೂರ್ವ ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ. ಕುಮಾರ್ ಮಾತನಾಡಿ, ಶಾಲೆಯಲ್ಲಿ ಏರ್ಪಡಿಸಿದ ವಿಜ್ಞಾನ ವಸ್ತು ಪ್ರದರ್ಶನವನ್ನು ವೀಕ್ಷಿಸುವ ಅವಕಾಶ ದೊರೆಯಿತು. ವಿದ್ಯಾರ್ಥಿಗಳು ತಾವು ತಯಾರಿಸಿದ ವಿಜ್ಞಾನ ಮಾದರಿಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿ ನೀಡಿದ್ದು ಗಮನಾರ್ಹವಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನ ಚಿಂತನೆ ಹಾಗೂ ಸೃಜನಶೀಲತೆಯನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಮುಖ್ಯ ಶಿಕ್ಷಕರಾದ ರಮೇಶ್ ಪಿ.ಕೆ. ಮಾತನಾಡಿ, ಈ ತಿಂಗಳ ಅಂತ್ಯದ ವೇಳೆಗೆ ಎರಡನೇ ಸಂಕಲನಾತ್ಮಕ ಪರೀಕ್ಷೆಗಳು ನಡೆಯಲಿವೆ. ಪೋಷಕರು ತಮ್ಮ ಮಕ್ಕಳಿಗೆ ಮನೆಯಲ್ಲಿ ಓದಲು ಅನುಕೂಲಕರವಾದ ವಾತಾವರಣವನ್ನು ಕಲ್ಪಿಸಬೇಕು. ಹೆಚ್ಚು ಸಮಯವನ್ನು ಟಿವಿ ಮತ್ತು ಮೊಬೈಲ್ ಬಳಕೆಗೆ ನೀಡದೇ, ಓದು-ಬರಹ ಹಾಗೂ ಮನನದ ಕಡೆಗೆ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ ಎಸ್ ಹರೀಶ್ ಅಧ್ಯಕ್ಷತೆ ವಹಿಸಿದ್ದರು ಸದಸ್ಯರಾದ ಸಿದ್ದಪ್ಪ ಪಾಲಾಕ್ಷಪ್ಪ ನಿರ್ಮಲ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ವಿನುತಾ ಪ್ರಾರ್ಥನೆ ಸಲ್ಲಿಸಿದರು. ವನಿತಾ ಸ್ವಾಗತಿಸಿದರು. ಶಿಕ್ಷಕ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ದೀಪಾ ವಂದಿಸಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳು ಪೋಷಕರ ಗಮನ ಸೆಳೆದವು.ಪೋಷಕರು ಮಕ್ಕಳ ಪ್ರಯತ್ನವನ್ನು ಮೆಚ್ಚಿ ಪ್ರೋತ್ಸಾಹಿಸಿದರು.

Author