ಶಿವಮೊಗ್ಗ | ದೊಡ್ಡ ದಾನವಂದಿ ಶಾಲೆಯಲ್ಲಿ ಮಕ್ಕಳ ಸಂತೆ-ಗಣಿತ ಕಲಿಕೆಗೆ ಹೊಸ ದಾರಿ

ಶಿವಮೊಗ್ಗ

ಶಿವಮೊಗ್ಗ, ಮಕ್ಕಳ ಸಂಭ್ರಮ, ಪೋಷಕರ ಕುತೂಹಲ ಮತ್ತು ಗ್ರಾಮಸ್ಥರ ಉತ್ಸಾಹದ ನಡುವೆ ತಾಲೂಕಿನ ಆಯನೂರು ಕ್ಲಸ್ಟರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೊಡ್ಡ ದಾನವಂದಿಯಲ್ಲಿ ವಿಶಿಷ್ಟವಾದ “ಮಕ್ಕಳ ಸಂತೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆವರಣವೇ ಆ ದಿನ ಒಂದು ಸಣ್ಣ ಸಂತೆಯಂತಾಗಿ ಕಾಣಿಸಿಕೊಂಡು, ಮಕ್ಕಳ ಚಟುವಟಿಕೆಗಳು ಎಲ್ಲರ ಗಮನಸೆಳೆದವು.

ಈ ಮಕ್ಕಳ ಸಂತೆಯಲ್ಲಿ ೧ರಿಂದ ೫ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿ ತರಕಾರಿ, ಹಣ್ಣು ಮೊಟ್ಟೆ ಸೇರಿದಂತೆ ವಿವಿಧ ವಸ್ತುಗಳನ್ನು ತರಿಸಿ ಸ್ವತಃ ಮಾರಾಟ ಮಾಡುವ ಮೂಲಕ ವ್ಯಾಪಾರದ ಅನುಭವವನ್ನು ಪಡೆದುಕೊಂಡರು. ಮಕ್ಕಳೇ ವ್ಯಾಪಾರಿಗಳು ಆಗಿ ಬೆಲೆ ನಿಗದಿ ಮಾಡಿ, ಹಣ ಪಡೆದು, ಉಳಿದ ಹಣವನ್ನು ಮರಳಿ ನೀಡುವಂತಹ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿದರು.

ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ಗಣಿತದ ಅಂಶಗಳ ಅರಿವುಹೆಚ್ಚಾಗಿರುವುದು ಕಂಡುಬಂತು,ಮಕ್ಕಳ ಸಂತೆಯನ್ನು ವೀಕ್ಷಿಸಲು ಇಲಾಖೆಯಿಂದ ಭೇಟಿ ನೀಡಿದ ಆಯನೂರು ಕ್ಲಸ್ಟರಿನ ಸಿಆರ್‌ಪಿ ಮಾಧವ ಮಾತನಾಡಿ, ಮಕ್ಕಳ ಸಂತೆ ಕಾರ್ಯಕ್ರಮವು ಮಕ್ಕಳಿಗೆ ತಮ್ಮ ದೈನಂದಿನ ಜೀವನದಲ್ಲಿ ಗಣಿತದ ಬಳಕೆಯನ್ನು ವಾಸ್ತವಿಕವಾಗಿ ಅರಿಯುವಂತೆ ಮಾಡುತ್ತದೆ.

ಈ ರೀತಿಯ ಚಟುವಟಿಕೆಗಳು ಕಲಿಕೆಯನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ ಬದುಕಿನ ಅನುಭವದೊಂದಿಗೆ ಜೋಡಿಸುತ್ತವೆ ಎಂದು ಹೇಳಿದರು.ಎಸ್‌ಡಿಎಂಸಿ ಅಧ್ಯಕ್ಷೆ ಮಾಲಾ ಮಾತನಾಡಿ, ಶಾಲೆಯಲ್ಲಿ ಈ ರೀತಿಯ ಸಂತೆ ಆಯೋಜಿಸಿರುವುದು ಬಹಳ ಸಂತೋಷ ತಂದಿದೆ.

ಮಕ್ಕಳಿಗೆ ವಿಶೇಷವಾಗಿ ಗಣಿತ ವಿಷಯವನ್ನು ಸರಳವಾಗಿ ಮತ್ತು ಆಸಕ್ತಿಯಿಂದ ಕಲಿಯಲು ಇದು ಉತ್ತಮ ಅವಕಾಶವಾಗಿದೆ. ತಮ್ಮ ಸ್ವಂತ ಅನುಭವದ ಮೂಲಕ ಮಕ್ಕಳು ಕಲಿಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಹಿಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ನಡೆಯುತ್ತಿದ್ದ ಸಂತೆಗಳ ಸಂಸ್ಕೃತಿ ಮತ್ತೆ ನೆನಪಾಯಿತು. ಇಂದಿನ ಮಕ್ಕಳಿಗೆ ಸಂತೆ ಎಂಬ ಕಲ್ಪನೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ನಮ್ಮೂರಿನಲ್ಲಿ ಮಕ್ಕಳ ಸಂತೆ ನಡೆದಿರುವುದು ತುಂಬಾ ಖುಷಿ ತಂದಿದೆ ಎಂದು ಹೇಳಿದರು.

ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ಸವಿತಾ ಮತ್ತು ರೂಪಾ ಕೂಡ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಕಲಿಕೆಯ ಆಸಕ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವೆಂದು ಹೇಳಿದರು.ಈ ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ್ ಮತ್ತು ಶಿಕ್ಷಕ ಸತೀಶ್ ಪಿ.ಕೆ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಗ್ರಾಮಸ್ಥರು, ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.

ಒಟ್ಟಾರೆ, ದೊಡ್ಡ ದಾನವಂದಿ ಶಾಲೆಯಲ್ಲಿ ನಡೆದ ಮಕ್ಕಳ ಸಂತೆ ಮಕ್ಕಳಿಗೆ ಕಲಿಕೆಯ ಜೊತೆಗೆ ಬದುಕಿನ ಅನುಭವವನ್ನು ನೀಡಿದ ವಿಶಿಷ್ಟ ಕಾರ್ಯಕ್ರಮವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Author