ಶಿವಮೊಗ್ಗ | ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ ಮಕ್ಕಳ ಹಕ್ಕುಗಳ ಬಗ್ಗೆ ಅರಿವು

ಶಿವಮೊಗ್ಗ

ಶಿವಮೊಗ್ಗ, ಲಕ್ಷ್ಮೀ ದೇವಿಯ ಜೊತೆಗೆ ಸರಸ್ವತಿ ದೇವಿಯನ್ನು ಪೂಜಿಸುವುದು ನಮ್ಮ ಸಂಸ್ಕೃತಿಯ ಮಹತ್ವದ ಭಾಗವಾಗಿದೆ. ಸರಸ್ವತಿ ದೇವಿಯ ಅನುಗ್ರಹ ಪಡೆಯಲು ಶಾಲೆಯಲ್ಲಿ ಶಿಕ್ಷಕರು ಕಲಿಸುವ ಶಿಕ್ಷಣವನ್ನು ನಿಷ್ಠೆ ಹಾಗೂ ಶ್ರದ್ದೆಯಿಂದ ಕಲಿಯಬೇಕು ಎಂದು ರಾಜ್ಯ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷರಾದ ಉಮೇಶ್ ಆರಾಧ್ಯ ಹೇಳಿದರು.

ಅವರು ಶಿವಮೊಗ್ಗ ತಾಲ್ಲೂಕಿನ ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು ಪರಿಶ್ರಮ ಮತ್ತು ಶಿಕ್ಷಣದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮದ ಅಂಗವಾಗಿ ಮಕ್ಕಳ ಹಕ್ಕುಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ. ಮಕ್ಕಳಿಗೆ ದೊರೆಯಬೇಕಾದ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ವಿವರಿಸಿದರು.

ಸಂವಾದದಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ, ಸರಿಯಾದ ಉತ್ತರ ನೀಡಿದ ಮಕ್ಕಳಿಗೆ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದರು.ಇದೇ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆ ಹೊಂದಿರುವ ಶಿಕ್ಷಕರಾದ ವಿಜಯಕುಮಾರ್ ಅವರಿಗೆ ಶಾಲಾ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ನೀಡಲಾಯಿತು.

ಹಲವು ವರ್ಷಗಳಿಂದ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು ಮಕ್ಕಳ ಸ್ನೇಹಿಯಾಗಿ, ಹಿರಿಯ ಅಣ್ಣನಂತೆ ನಡೆದು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಶ್ರಮಿಸಿದ್ದಾರೆ ಎಂದು ಶಿಕ್ಷಕರು ಹಾಗೂ ಪೋಷಕರು ಕೊಂಡಾಡಿದರು.

ಕಾರ್ಯಕ್ರಮಕ್ಕೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಸದಸ್ಯರಾದ ಸಿದ್ದಪ್ಪ, ಪ್ರಭಾಕರ್, ನಿರ್ಮಲ, ಲಕ್ಷ್ಮೀದೇವಿ ಹಾಗೂ ಗ್ರಾಮದ ಮುಖಂಡರಾದ ಮೈಲಾರಪ್ಪ ರಮೇಶಪ್ಪ, ಮಲ್ಲಿಕಪ್ಪ ಗಣೇಶ್ ಕೃಷ್ಣಪ್ಪ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ರತ್ನಮ್ಮ ಸದಸ್ಯ ಬಿ.ಕೆ. ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಶಿಕ್ಷಕರಾದ ರಮೇಶ್ ಪಿ.ಕೆ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕ ಕೃಷ್ಣಮೂರ್ತಿ ಮಾತನಾಡಿ, ವರ್ಗಾವಣೆಗೊಂಡ ವಿಜಯಕುಮಾರ್ ಅವರು ಶಾಲೆಯ ಮಕ್ಕಳೊಂದಿಗೆ ಅತ್ಮೀಯ ಸಂಬಂಧ ಹೊಂದಿ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸದಾ ಶ್ರಮಿಸಿದ್ದಾರೆ ಎಂದು ಹೇಳಿದರು.

ಶಿಕ್ಷಕಿ ವಿನುತಾ ಪ್ರಾರ್ಥನೆ ಸಲ್ಲಿಸಿದರು. ವನಿತಾ ಸ್ವಾಗತಿಸಿದರು. ದೀಪಾ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Author