ಶಿವಮೊಗ್ಗ, ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ ಯುವಕನೊಬ್ಬನನ್ನು ಅಕ್ಕ ಪಡೆ ವಶಕ್ಕೆ ಪಡೆದುಕೊಂಡು ಪೋಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿರುವ ಘಟನೆ ನಡೆದಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಕ್ಕಪಡೆ ಸಿಬ್ಬಂದಿಗಳು ಎಂದಿನಂತೆ ಗಸ್ತು ತಿರುಗುತ್ತಿದ್ದರು. ಈ ವೇಳೆ ಯುವತಿಯೊಬ್ಬಳು ಒಂಟಿಯಾಗಿ ಅಳುತ್ತಾ ನಿಂತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಮಹಿಳಾ ಸಿಬ್ಬಂದಿಗಳು ಆಕೆಯ ಬಳಿ ತೆರಳಿ ಸಮಾಧಾನಪಡಿಸಿ ವಿಚಾರಣೆ ನಡೆಸಿದ್ದಾರೆ.
ಆಗ ಯುವತಿ, ಅಪರಿಚಿತ ಯುವಕನೊಬ್ಬ ಸತತವಾಗಿ ತನಗೆ ಉಪಟಳ ನೀಡುತ್ತಿದ್ದಾನೆ ಎಂದು ದೂರಿದ್ದಾಳೆ. ಈ ಹಿನ್ನೆಲೆ ಸಿಬ್ಬಂದಿಗಳು ತಕ್ಷಣವೇ ಕಾರ್ಯಾಚರಣೆ ನಡೆಸಿ ಸ್ಥಳದಲ್ಲೇ ಇದ್ದ ಯುವಕನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಯುವಕನನ್ನು ದೊಡ್ಡಪೇಟೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಆತನ ವಿರುದ್ಧ ಲಘು ಪ್ರಕರಣ ದಾಖಲಿಸಲಾಗಿದೆ. ನಂತರ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.



