ಕಾಗೋಡು ತಿಮ್ಮಪ್ಪ ಅವರಿಂದ ಜನ್ಮದಿನದ ಆಶೀರ್ವಾದ ಪಡೆದ ಮಧು ಬಂಗಾರಪ್ಪ

ಶಿವಮೊಗ್ಗ

ಸಾಗರ, ರಾಜ್ಯದಲ್ಲಿ ೫೬ಸಾವಿರ ಹುದ್ದೆಯನ್ನು ಭರ್ತಿ ಮಾಡುತ್ತಿರುವುದು ಐತಿಹಾಸಿಕ ನಿರ್ಧಾರ. ದೇಶದ ಯಾವ ರಾಜ್ಯದಲ್ಲೂ ಇಷ್ಟು ದೊಡ್ಡ ಪ್ರಮಾಣದ ನೇಮಕಾತಿ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಇಲ್ಲಿನ ಜೋಸೆಫ್ ನಗರದಲ್ಲಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಮನೆಗೆ ಸೋಮವಾರ ತಮ್ಮ ಜನ್ಮದಿನದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಮೀಸಲಾತಿ ನಿಗಧಿಪಡಿಸದೆ ನೇಮಕಾತಿ ಮಾಡಿಕೊಂಡರೆ ಕೆಲವು ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ಹೇಳಿದರು.

ಶರಾವತಿ ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಹೋರಾಟ ಮಾಡುತ್ತಿರುವವರ ಕೈನಲ್ಲಿಯೆ ಹಿಂದೆ ಕೇಂದ್ರ ಮತ್ತು ರಾಜ್ಯದ ಅಧಿಕಾರ ಇತ್ತು. ಅರ್ಜಿಗಳನ್ನು ವಜಾ ಮಾಡಿ ಈಗ ಹೋರಾಟ ಎನ್ನುತ್ತಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರ ಪರ ನಾವು ಹೋರಾಟ ಮಾಡುತ್ತೇವೆ. ಅಂತಿಮವಾಗಿ ಕಾನೂನು ಏನು ಹೇಳುತ್ತದೆಯೋ ಅದನ್ನೆ ನಾವು ಮಾಡುವುದು ಅನಿವಾರ್ಯ.

ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನಾವು ಕಾಗೋಡು ತಿಮ್ಮಪ್ಪ ಅವರ ಎದುರು ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಹಕ್ಕು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಅದನ್ನು ಖಂಡಿತಾ ಈಡೇರಿಸುತ್ತೇವೆ.

ಈಗಾಗಲೆ ನ್ಯಾಯಾಲಯ ಉತ್ತಮವಾಗಿ ಸ್ಪಂದಿಸುತ್ತಿದೆ, ಕೇಂದ್ರ ಸರ್ಕಾರ ಸಕಾರಾತ್ಮಕವಾಗಿದೆ. ಶರಾವತಿ, ಚಕ್ರ, ವರಾಹಿ ಎಲ್ಲರಿಗೂ ನ್ಯಾಯ ಸಿಗುತ್ತದೆ. ಈಗ ಭಾಷಣ ಹೊಡೆಯುವವರು ಹಿಂದೆ ಅಧಿಕಾರದಲ್ಲಿದ್ದಾಗ ಪರಿಭಾವಿತ ಅರಣ್ಯ ಕಾಯ್ದೆ ಜಾರಿಗೆ ತಂದಿದ್ದರು. ಡೀಮ್ಡ್ ಫಾರೆಸ್ಟ್ ಕಾಯ್ದೆ ತಿದ್ದುಪಡಿಗೆ ಸಹ ಅವಕಾಶ ಸಿಕ್ಕಿದೆ.

ನ್ಯಾಯಾಲಯ ಆದೇಶ ಹೊರತುಪಡಿಸಿ ಇತರೆ ಸಂದರ್ಭದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇದೇ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅಭಿನಂದಿಸಿದರು.

ಈ ಸಂದರ್ಭದಲ್ಲಿ ದೀಪಾ ಕಾಗೋಡು, ಅನಿತಾ ಕುಮಾರಿ, ಕಲಸೆ ಚಂದ್ರಪ್ಪ, ಗಿರೀಶ್ ಕೋವಿ, ಲೋಕೇಶ್ ಗಾಳಿಪುರ, ತಾರಾಮೂರ್ತಿ, ಮಹಾಬಲೇಶ್ವರ ಕುಗ್ವೆ, ಡಿ.ದಿನೇಶ್, ನಾರಾಯಣ ಅರಮನೆಕೇರಿ ಇನ್ನಿತರರು ಹಾಜರಿದ್ದರು.

Author