ಶಿವಮೊಗ್ಗ | ರಂಜಾನ್ ದೇಣಿಗೆ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಿರಿಕ್​​ ; 10 ಮಂದಿ ಬಂಧನ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಗಗ್ರಿ ಪ್ರದೇಶದಲ್ಲಿ ಭಾನುವಾರ ರಂಜಾನ್ ಹಬ್ಬದ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಈ ವೇಳೆ ನಡೆದ ಕಲ್ಲು ತೂರಾಟದಿಂದಾಗಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದ್ದಲ್ಲದೆ, ಶಿಕಾರಿಪುರ-ಶಿರಾಳಕೊಪ್ಪ ಮುಖ್ಯ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಘಟನೆಯ ಹಿನ್ನೆಲೆ:

ಮುಂಬರುವ ರಂಜಾನ್ ಹಬ್ಬದ ಆಚರಣೆಗಾಗಿ ಮಸೀದಿಯಲ್ಲಿ ನಡೆದ ಸಭೆಯಲ್ಲಿ ಪ್ರತಿ ಕುಟುಂಬದಿಂದ ಕಡ್ಡಾಯವಾಗಿ 1,000 ರೂ. ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಆದರೆ, ಈ ಮೊತ್ತದ ಸಂಗ್ರಹಕ್ಕೆ ಮತ್ತೊಂದು ಗುಂಪು ತೀವ್ರ ವಿರೋಧ ವ್ಯಕ್ತಪಡಿಸಿತು. ಈ ವಾಗ್ವಾದವು ವಿಕೋಪಕ್ಕೆ ತಿರುಗಿ, ಎರಡೂ ಗುಂಪುಗಳ ಸದಸ್ಯರು ಪರಸ್ಪರ ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಲು ಮುಂದಾದರು.ಮುಖ್ಯ ರಸ್ತೆಯಲ್ಲೇ ಈ ಕಲ್ಲು ತೂರಾಟ ನಡೆದಿದ್ದರಿಂದ ರಸ್ತೆ ಸಂಚರಿಸುತ್ತಿದ್ದ ಸಾರ್ವಜನಿಕರು ಭಯಭೀತರಾದರು.

ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಶಿಕಾರಿಪುರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಗುಂಪುಗಳನ್ನು ಚದುರಿಸಿದರು.

ಈ ಗಲಭೆಗೆ ಸಂಬಂಧಿಸಿದಂತೆ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿದ್ದು, ಘಟನೆಯಲ್ಲಿ ಭಾಗಿಯಾದ ಆರೋಪದ ಮೇಲೆ 10 ಜನರನ್ನು ಬಂಧಿಸಲಾಗಿದೆ.

Author