ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ವಿಮಾನಯಾನ ಭಾಗ್ಯ

ಶಿವಮೊಗ್ಗ

ಶಿವಮೊಗ್ಗ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಮಧು ಬಂಗಾರಪ್ಪ ಅವರು ತಮ್ಮ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸೊರಬ ತಾಲೂಕಿನ ಪುರಸಭೆ ಹಾಗೂ ಆನವಟ್ಟಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪೌರಕಾರ್ಮಿಕರಿಗೆ ವಿಮಾನಯಾನ ವ್ಯವಸ್ಥೆ ಮಾಡಿಕೊಟ್ಟು ಅವರು ಹೊಸ ಮಾದರಿಯನ್ನು ಸ್ಥಾಪಿಸಿದ್ದಾರೆ.

ಈ ವಿಶೇಷ ಕಾರ್ಯಕ್ರಮವು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನಡೆಯಿತು. ಈ ಅಪರೂಪದ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕ್ಷಿಯಾದರು. ಸಚಿವರಿಗೆ ಜನ್ಮದಿನದ ಶುಭಾಶಯ ಕೋರಿದ ಸಿಎಂ, ವಿಮಾನ ಪ್ರಯಾಣಕ್ಕೆ ಸಜ್ಜಾಗಿದ್ದ ಪೌರಕಾರ್ಮಿಕರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು.

‘ಶ್ರಮಿಕ ವರ್ಗದವರನ್ನು ಈ ರೀತಿಯಾಗಿ ಸನ್ಮಾನಿಸಿ, ಅವರಿಗೆ ವಿಮಾನಯಾನದಂತಹ ಅಪರೂಪದ ಅನುಭವ ಕಲ್ಪಿಸುವುದು ಶ್ಲಾಘನೀಯ ಕೆಲಸ’ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು.ಇತ್ತ, ‘ನಮ್ಮ ಸೇವೆಯನ್ನು ಗುರುತಿಸಿ ಇಂತಹ ದೊಡ್ಡ ಅವಕಾಶ ನೀಡಿದ ಸಚಿವರಿಗೆ ನಾವು ಸದಾ ಋಣಿಯಾಗಿರುತ್ತೇವೆ’ ಎಂದು ಪೌರಕಾರ್ಮಿಕರು ಭಾವುಕರಾಗಿ ಪ್ರತಿಕ್ರಿಯಿಸಿದರು.

ಸಾಮಾನ್ಯವಾಗಿ ಕೇಕ್ ಕತ್ತರಿಸಿ, ಸಮಾರಂಭ ನಡೆಸಿ ಜನ್ಮದಿನ ಆಚರಿಸುವ ರಾಜಕೀಯ ನಾಯಕರ ನಡುವೆ, ಕಾರ್ಮಿಕರಿಗೆ ವಿಮಾನಯಾನ ಅನುಭವ ನೀಡುವ ಮೂಲಕ ಮಧು ಬಂಗಾರಪ್ಪ ಅವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ವಿಶೇಷವಾಗಿದೆ.

Author