ಶಿವಮೊಗ್ಗ, ನಿನ್ನೆ ದಿವಸ ಸೋಮವಾರ ರಾತ್ರಿ ಸಂಕೇತ್ ಕೊಲೆ ನಡೆದಿದೆ. ಇದಕ್ಕೂ 2 ದಿನಗಳ ಹಿಂದೆ ಕ್ರಿಕೆಟ್ ಪಂದ್ಯ ನಡೆದಿತ್ತು. ಈ ಪಂದ್ಯದ ವಿಚಾರಕ್ಕೆ ಗಲಾಟೆ ನಡೆದಿದೆ. ಗಲಾಟೆ ಸಂಬಂಧಿಸಿದಂತೆ ಏಳು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಿಚಾರಣೆ ನಡೆಸುತ್ತಿರೋದಾಗಿ ಶಿವಮೊಗ್ಗ ಎಸ್ಪಿ ನಿಖಿಲ್ ಬಿ ಹೇಳಿಕೆ ನೀಡಿದ್ದಾರೆ.
ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಿದ್ದೇವೆ ಎಂದು ಎಸ್ಪಿ ನಿಖಿಲ್ ಹೇಳಿದ್ದು, ಜೊತೆಗೆ ಆರೋಪಿಗಳನ್ನು ಗಾಂಜಾ ಟೆಸ್ಟ್ಗೆ ಒಳಪಡಿಸುತ್ತೇವೆ ಎಂದಿದ್ದಾರೆ. ಅಲ್ಲದೇ ಗಾಂಜಾ ಹಾವಳಿ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಜೊತೆಗೆ ಇಲ್ಲೇ ಒಂದು ಪೊಲೀಸ್ ಉಪಠಾಣೆಯನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಗಾಂಜಾ ದಂಧೆ, ಹಾವಳಿ ಹೆಚ್ಚಾಗಿದೆ ಎಂದು ಸ್ಥಳೀಯರು ಕೂಡ ದೂರಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಬರ್ತಿದ್ದನಂತೆ. ಈ ವೇಳೆ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಅನ್ಯಕೋಮಿನ ಬಾಲಕರು ಸಂಕೇತ್ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ್ದಾರೆ. ಪರಿಣಾಮ ಸಂಕೇತ್ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರು ಪ್ರಾಣ ಉಳಿಯಲಿಲ್ಲ. ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸಂಕೇತ್ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಇದ್ದೊಬ್ಬ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಕನ ಸಾವಿಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಶಿವಮೊಗ್ಗ ನಗರದಾದ್ಯಂತ ಪೊಲೀಸ್ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದೆ.



