ಶಿವಮೊಗ್ಗ | ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣ ; ಸರ್ಕಾರದಿಂದ ಪರಿಹಾರ ಘೋಷಣೆ

ಶಿವಮೊಗ್ಗ

ಶಿವಮೊಗ್ಗ, ನಿನ್ನೆ ದಿವಸ ಸೋಮವಾರ ರಾತ್ರಿ ನಡೆದ ವಿದ್ಯಾರ್ಥಿ ಸಂಕೇತ್ ಕೊಲೆ ಪ್ರಕರಣಕ್ಕೆ ಕ್ರಿಕೆಟ್ ಪಂದ್ಯ ಸಂಬಂಧಿತ ಗಲಾಟೆಯೇ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ.

ಘಟನೆಗೆ ಎರಡು ದಿನಗಳ ಮುಂಚೆ ನಡೆದ ಕ್ರಿಕೆಟ್ ಪಂದ್ಯ ವೇಳೆ ವಾಗ್ವಾದ ಉಂಟಾಗಿ, ಅದೇ ವೈಮನಸ್ಸು ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.ಈ ಪ್ರಕರಣದಲ್ಲಿ ಈಗಾಗಲೇ ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.

ಪ್ರಕರಣದ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಪ್ರದೇಶದಲ್ಲಿ ಮಾದಕ ವಸ್ತುಗಳ ಹಾವಳಿ ಕುರಿತು ಸಹ ತನಿಖೆ ನಡೆಯುತ್ತಿದೆ. ಸ್ಥಳೀಯರ ಭದ್ರತೆಗೆ ಹೆಚ್ಚುವರಿ ಪೊಲೀಸ್ ಬಲ ನಿಯೋಜನೆ ಹಾಗೂ ಉಪ ಪೊಲೀಸ್ ಠಾಣೆ ತೆರೆಯುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

oplus_0

ಇದಕ್ಕೂ ಮಧ್ಯೆ, ಮೃತ ಸಂಕೇತ್ ಕುಟುಂಬಕ್ಕೆ ಸರ್ಕಾರದಿಂದ ₹15 ಲಕ್ಷ ಪರಿಹಾರ ಘೋಷಿಸಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹10 ಲಕ್ಷ ಮತ್ತು ಶಿಕ್ಷಣ ಇಲಾಖೆಯಿಂದ ₹5 ಲಕ್ಷ ನೀಡಲಾಗುತ್ತದೆ ಎಂದು ಸರ್ಕಾರದ ಪರವಾಗಿ ಪ್ರಭುಲಿಂಗ ಕವಳಿಕಟ್ಟೆ ತಿಳಿಸಿದ್ದಾರೆ.

ಗಾಯಗೊಂಡಿರುವ ಗಿರೀಶ್ ಅವರಿಗೆ ಸಹ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪ್ರದೇಶದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಾಸಕ ಚನ್ನಬಸಪ್ಪ ಆಕ್ರೋಶ:

ಊರುಗಡೂರಿನ ಸರ್ಕಾರಿ ಶಾಲೆ ವಿದ್ಯಾರ್ಥಿ ಸ್ಪೇಷಲ್‌ ಕ್ಲಾಸ್ ಮುಗಿಸಿಕೊಂಡು ಮನೆಗೆ ಬರದ ಸ್ಥಿತಿ ನಿರ್ಮಾಣ ಆಗಿದೆ. ಶಾಲೆಯ ಕಾಂಪೌಂಡ್​ನಿಂದ ಹೊರ ಬಂದ ತಕ್ಷಣ ಒಂದು ದೊಡ್ಡ ಗುಂಪು ಬಂದು ಹೊಡೆದು ಹಾಕಿದೆ.

ಇನ್ನೊಬ್ಬ ಹುಡುಗ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸೊಳೆಬೈಲು, ಊರುಗಡೂರು ಸೂಕ್ಷ್ಮ ಗ್ರಾಮಗಳು. ಇದನ್ನು ಎಸ್​​ಪಿ ಅವರ ಗಮನಕ್ಕೆ ತಂದಿದ್ದೇೆ‌ವೆ ಎಂದು ಶಾಸಕ ಎಸ್​.ಎನ್​.ಚನ್ನಬಸಪ್ಪ ತಿಳಿಸಿದ್ದಾರೆ.

ಬಂಧನ ಮಾಡಿದ್ರೆ ಹೋದ ಪ್ರಾಣ ವಾಪಸ್ ಬರುತ್ತದೆಯೇ?. ಪ್ರಾಣ ಹೋಗದ ರೀತಿ ನೋಡಿಕೊಳ್ಳುವ ಹೊಣೆಗಾರಿಕೆ ಯಾರದು? ‌ಸರ್ಕಾರದ ಅನೇಕ ನಿರ್ಧಾರಗಳು ಈ ರೀತಿಯ ಕೃತ್ಯಗಳಿಗೆ ಕಾರಣವಾಗಿದೆ ಎಂದು ಶಾಸಕ ಚನ್ನಬಸಪ್ಪ ಆರೋಪಿಸಿದ್ದಾರೆ.

Author