ಶಿವಮೊಗ್ಗ ತಾಲ್ಲೂಕಿನ ಕೂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿಶೇಷ ದಾಖಲಾತಿ ಅಂದೋಲನ ಹಾಗೂ ಜಾಥಾ ಇಂದು ಉತ್ಸಾಹಭರಿತವಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬಿ.ಕೆ. ಕುಮಾರ್, ‘ನಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ದ್ವಿಭಾಷಾ ತರಗತಿಗಳನ್ನು ಆರಂಭಿಸಲಾಗುತ್ತಿದೆ.
ಗ್ರಾಮಸ್ಥರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಕಡೆಗೆ ಕಳುಹಿಸುವ ಬದಲು ನಮ್ಮದೇ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಮಾಡಿಸಬೇಕು. ಉತ್ತಮ ಶಿಕ್ಷಣ, ಅನುಭವಸಂಪನ್ನ ಶಿಕ್ಷಕರು ಮತ್ತು ಸಮರ್ಪಕ ಸೌಲಭ್ಯಗಳು ನಮ್ಮ ಶಾಲೆಯಲ್ಲಿ ಲಭ್ಯವಿವೆ,’ ಎಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ರಮೇಶ್ ಪಿ.ಕೆ ಮಾತನಾಡಿ, ‘ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ತರಗತಿಗಳಾದ ಎಲ್ಜಿ ಹಾಗೂ ಯುಕೆಜಿ ಆರಂಭವಾಗಲಿದೆ. ಜೊತೆಗೆ ಐದನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸುತ್ತಿದ್ದೇವೆ.
ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು, ನೋಟ್ಪುಸ್ತಕಗಳು, ಸಮಗ್ರ ಶಿಕ್ಷಣ ಸೌಲಭ್ಯಗಳು ಹಾಗೂ ಮಧ್ಯಾಹ್ನ ಬಿಸಿಯೂಟ ನೀಡಲಾಗುತ್ತಿದೆ. ಪೋಷಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಶಾಲೆಯಿಂದ ಹೊರಗುಳಿದಿದ್ದ ಒಂದು ಮಗುವನ್ನು ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಮೂಲಕ ದಾಖಲಾತಿ ಅಂದೋಲನಕ್ಕೆ ಅರ್ಥಪೂರ್ಣ ಆರಂಭ ನೀಡಲಾಯಿತು. ಇದು ಗ್ರಾಮಸ್ಥರ ಗಮನ ಸೆಳೆದಿತು.ಜಾಥಾದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಹರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಗ್ರಾಮದ ಮುಖಂಡರಾದ ಗಣೇಶ್, ಶಿಕ್ಷಕರಾದ ಕೃಷ್ಣಮೂರ್ತಿ, ವನಿತಾ, ವಿನುತಾ ಮತ್ತು ದೀಪಾ ಸೇರಿದಂತೆ ಪೋಷಕರು ಭಾಗವಹಿಸಿದ್ದರು. ಜಾಥಾ ಗ್ರಾಮ ಬೀದಿಗಳಲ್ಲಿ ಸಂಚರಿಸಿ, ಮನೆಮನೆಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮನವಿ ಮಾಡಲಾಯಿತು.
ಶಿಕ್ಷಣದ ಮಹತ್ವವನ್ನು ಸಾರುವ ಘೋಷಣೆಗಳು ಜಾಥಾಕ್ಕೆ ಮತ್ತಷ್ಟು ಚೈತನ್ಯ ತುಂಬಿದವು.ಗ್ರಾಮದಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾದ ಈ ವಿಶೇಷ ದಾಖಲಾತಿ ಆಂದೋಲನಕ್ಕೆ ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸರ್ಕಾರಿ ಶಾಲೆಯ ಅಭಿವೃದ್ಧಿ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸಮೂಹ ಸಹಕಾರ ಅಗತ್ಯವೆಂಬ ಸಂದೇಶವನ್ನು ಈ ಕಾರ್ಯಕ್ರಮ ಸ್ಪಷ್ಟಪಡಿಸಿತು.



