ಶಿವಮೊಗ್ಗ | ಟ್ರಾಫಿಕ್ ಪೊಲೀಸರಿಂದ ನಗರದಲ್ಲಿ ಉತ್ತಮ ಕೆಲಸ ; ಸಾರ್ವಜನಿಕರಿಂದ ಪ್ರಶಂಸೆ

ಶಿವಮೊಗ್ಗ

ಶಿವಮೊಗ್ಗ, ಟ್ರಾಫಿಕ್ ಪೊಲೀಸ್ ಇಲಾಖೆ ಫುಟ್ ಪಾತ್ ಒತ್ತುವರಿ ಮಾಡಿಕೊಂಡಿರುವ ವ್ಯಾಪಾರಿಗಳಿಗೆ ಖಡಕ್ ಸೂಚನೆ ನೀಡುತ್ತಾ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ, ಪಾದಚರಿಗಳಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ.

ಹಾಗೆಯೇ ನಿನ್ನೆ ದಿನ ಶಿವಮೊಗ್ಗ ನಗರದ 100 ಅಡಿ ರಸ್ತೆ ವ್ಯಾಪ್ತಿಯಲ್ಲಿರುವ ಲಕ್ಷ್ಮೀ ಟಾಕೀಸ್ ವೃತ್ತದಿಂದ ರಾಜಕುಮಾರ ವೃತ್ತ ಹಾಗೂ ಮೇದಾರ ಕೇರಿ ರಸ್ತೆ ಪ್ರದೇಶದಲ್ಲಿ, ಜೊತೆಗೆ ಫ್ರೀಡಂ ಪಾರ್ಕ್ ಎದುರು ಭಾಗದಲ್ಲಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಸಹಕಾರದೊಂದಿಗೆ ಪಾದಚಾರಿ ಮಾರ್ಗ (ಫುಟ್‌ಪಾತ್) ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ .

ಈ ಒಂದು ಕಾರ್ಯಾಚರಣೆ ವೇಳೆ ಪಾದಚಾರಿ ಮಾರ್ಗದಲ್ಲಿ ಇರಿಸಲಾದ ಅಂಗಡಿ ಫಲಕಗಳು, ಫಾಸ್ಟ್ ಫುಡ್ ಗಾಡಿಗಳು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಲಾಯಿತು.

ಪಾದಚಾರಿಗಳು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ರೀತಿಯಲ್ಲಿ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮೇಲಿನ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂದು ಸಂಬಂಧಿತರಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ಟ್ರಾಫಿಕ್ ಪೊಲೀಸರು ನೀಡಿದ್ದಾರೆ .

ಟ್ರಾಫಿಕ್ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅದರಂತೆ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಫೇಸ್ಬುಕ್ ಪೇಜ್ ನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ನಾಗರಿಕರು ಧನ್ಯವಾದ ತಿಳಿಸಿದ್ದಾರೆ ಹಾಗೂ ನಗರದ ಬೇರೆ ಬೇರೆ ಭಾಗದಲ್ಲಿ ಫುಟ್ ಪಾತ್ ಒತ್ತುವರಿ ಹಾಗೂ ಟ್ರಾಫಿಕ್ ಸಮಸ್ಯೆ ಕೂಡ ಇದೆ ರೀತಿ ಶೀಘ್ರದಲ್ಲಿ ಬಗೆಹರಿಸಿ ಕೊಡಿ ಎಂದು ಮನವಿ ಕೂಡ ಮಾಡಿದ್ದಾರೆ.

ನಗರದಲ್ಲಿ ದಿನ ನಿತ್ಯ ಸಾರ್ವಜನಿಕರು, ಪಾದಚಾರಿಗಳು, ವಾಹನ ಸವಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದೆ.

ಇದರೊಂದಿಗೆ ನಗರದ ನಾಗರಿಕರು ಸಹ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕಾರ ನೀಡಿದಲ್ಲಿ ಮಾತ್ರವೇ ಸಮಸ್ಯೆ ಬಗೆಹರಿಯಲು ಹಾಗೂ ಅನುಕೂಲ ಆಗಲು ಸಾಧ್ಯವಾಗಲಿದೆ.

ಉತ್ತಮ ಪ್ರಾಮಾಣಿಕ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಕಾರ್ಯ ನಗರದಲ್ಲಿ ಹೀಗೆ ಮುಂದುವರೆಸಿ ಎಂದು ನಾಗರಿಕರು ಆಶಿಸಿದ್ದಾರೆ.

Author