ಶಂಕರಘಟ್ಟ”ಸಂಶೋಧನೆ ಎಂಬುದು ಎಲ್ಲೋ ಶೂನ್ಯದಲ್ಲಿ ನಡೆಯುವ ಪ್ರಕ್ರಿಯೆಯಲ್ಲ, ಅದು ಒಂದು ನಿರ್ದಿಷ್ಟ ಸಂದರ್ಭಕ್ಕೆ ಒಳಪಟ್ಟು ನಡೆಯುವಂಥದ್ದು,” ಎಂದು ಮಾನಸ ಸೆಂಟರ್ ಫಾರ್ ಕಲ್ಚರಲ್ ಸ್ಟಡೀಸ್‌ನ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ವೇದಿಕೆ ಮತ್ತು ಅಂತರಶಿಸ್ತೀಯ ಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಜ್ಯ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಭವಿಷ್ಯ: ಸಮಕಾಲೀನ ಮತ್ತು ಉದಯೋನ್ಮುಖ ಸನ್ನಿವೇಶಗಳು’ ಎಂಬ ಒಂದು ದಿನದ ರಾಷ್ಟ್ರೀಯ ಸಂಶೋಧನಾ ವಿಚಾರಗೋಷ್ಠಿಯಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.ತಮ್ಮ ಭಾಷಣದಲ್ಲಿ ತತ್ವಪದಕಾರರ ಕವಿತೆಗಳನ್ನು ಉಲ್ಲೇಖಿಸಿದ ಅವರು, ಸಂಶೋಧನೆಯು ಕೇವಲ ಶೈಕ್ಷಣಿಕ ಚೌಕಟ್ಟಿಗೆ ಸೀಮಿತವಾಗದೆ, ಜನಪದೀಯ ಮತ್ತು ಸಾಂಸ್ಕೃತಿಕ ಬೇರುಗಳೊಂದಿಗೆ ಮೇಳೈಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯ ಸಂಶೋಧನಾ ವೇದಿಕೆ (ಏUಖಈ) ಹಾಗೂ ನೂತನ ವೆಬ್‌ಸೈಟ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, “ಇಂದಿನ ವಿಜ್ಞಾನ ಕ್ಷೇತ್ರದಲ್ಲಿ ‘ಕ್ವಾಂಟಮ್ ಮೆಕ್ಯಾನಿಕ್ಸ್’ ಪ್ರಭಾವ ಎಷ್ಟಿದೆಯೆಂದರೆ ಅದು ಎಲ್ಲ ವಿಜ್ಞಾನ ಶಾಖೆಗಳಿಗೂ ಆವರಿಸಿದೆ ಎಂದರು.
ಇರಾನ್ ಮೂಲದ ಗಣಿತಜ್ಞೆ ಮರ್ಯಮ್ ಮಿರ್ಜಾಖಾನಿ ಅವರ ಸಾಧನೆಯನ್ನು ಉದಾಹರಿಸಿದ ಅವರು, ಅಮೆರಿಕಾದ ಶಿಕ್ಷಣ ಪದ್ಧತಿಯಲ್ಲಿರುವ ‘ಅನೌಪಚಾರಿಕತೆ’ ಮತ್ತು ಹೊಸ ಆಲೋಚನೆಗಳಿಗೆ ನೀಡುವ ಮನ್ನಣೆಯನ್ನು ಶ್ಲಾಘಿಸಿದರು.
ಯುವ ಸಂಶೋಧಕರು ನವೀನ ಆಲೋಚನೆಗಳೊಂದಿಗೆ ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಐಐಎಂನ ಪ್ರಾದ್ಯಾಪಕರಾದ ಡಾ. ಎಂ.ಎಸ್. ಶ್ರೀರಾಮ್, ಹೈದರಾಬಾದ್ ಕೇಂದ್ರೀಯ ವಿವಿಯ ಪ್ರಾದ್ಯಾಪಕರಾದ ದೀಪಾ ಶ್ರೀನಿವಾಸ್, ತುಮಕೂರು ವಿವಿಯ ಪ್ರಾದ್ಯಾಪಕರಾದ ಶರತ್ ಚಂದ್ರ ರಾವ್ ಹಾಗೂ ಯುನಿಸೆಫ್ ಕನ್ಸಲ್ಟೆಂಟ್ ಪ್ರೊ. ಗೀತಾ ಮೆನನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವೇದಿಕೆಯಲ್ಲಿ ವಿವಿಯ ಹಣಕಾಸು ಅಧಿಕಾರಿ ಪ್ರೊ. ಎಚ್.ಎನ್. ರಮೇಶ್, ಸಂಶೋಧನಾ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕೆ., ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಡಾ. ನಿರಂಜನ ಪಿ, ಮುಖ್ಯ ಗ್ರಂಥಪಾಲಕರಾದ ಆರ್.ಎಚ್. ವಾಲ್ಮೀಕಿ ಉಪಸ್ಥಿತರಿದ್ದರು.
ವೇದಿಕೆಯ ಉಪಾಧ್ಯಕ್ಷರಾದ ಸ್ನೇಹ ಸ್ವಾಗತಿಸಿದರು, ಕಾರ್ಯದರ್ಶಿಯಾದ ಪ್ರಕಾಶ್ ವಂದಿಸಿದರು, ಸಂಶೋಧನಾರ್ಥಿ ಅಫ್ರಿನ್ ನಿರೂಪಿಸಿದರು.



