ಶಿವಮೊಗ್ಗ | ಡಿ.ಕೆ.ಶಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ; ಜಿಲ್ಲಾ ಒಕ್ಕಲಿಗರ ಒಕ್ಕೂಟ ಒತ್ತಾಯ

ಶಿವಮೊಗ್ಗ

ಶಿವಮೊಗ್ಗ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ಎರಡುವರೆ ವರ್ಷ ಪೂರ್ಣಗೊಂಡಿದ್ದು, ಡಿ.ಕೆ ಶಿವಕುಮಾರ್ ರವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಸಿದ್ದರಾಮಯ್ಯರವರಿಗೆ ಕೇಂದ್ರದಲ್ಲಿ ಉನ್ನತ ಮಟ್ಟದ ಹುದ್ದೆ ನೀಡಿ ದೇಶದ್ಯಾಂತ ಪಕ್ಷ ಸಂಘಟನೆಗೆ ಜವಾಬ್ದಾರಿ ನೀಡಬೇಕೆಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ “ಶಿವಮೊಗ್ಗ ಜಿಲ್ಲಾ ಒಕ್ಕೂಟ” ಒತ್ತಾಯ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಗೋ. ರಮೇಶ್ ಗೌಡ, ಒಂದು ವೇಳೆ ಪಕ್ಷನಿಷ್ಠ ಡಿ.ಕೆ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಒಕ್ಕಲಿಗ ಸಮುದಾಯ ಸೇರಿದಂತೆ ಅನೇಕ ಅಹಿಂದ ಒಗ್ಗಟ್ಟಾಗಿ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಡಿ.ಕೆ ಶಿ ವಿದ್ಯಾರ್ಥಿ ದೆಸೆಯಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟನೆ ಮಾಡುತ್ತಾ ಹಂತಹಂತವಾಗಿ ಬೆಳೆದು ಬಂದಿದ್ದು, ಪಕ್ಷದ ಎಲ್ಲಾ ಕಷ್ಟಸುಖಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಕ್ಷಕ್ಕಾಗಿ ದೇಶದ ಬೇರೆ ಬೇರೆ ರಾಜ್ಯಗಳ ಚುನಾವಣೆಯ ಜವಾಬ್ದಾರಿಯನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದು, ವಿರೋಧ ಪಕ್ಷವನ್ನು ಸಮರ್ಥವಾಗಿ ಎದುರಿಸುವ ಹಾಗೂ ಎಲ್ಲಾ ಜನಾಂಗದವರನ್ನು ಸಮನವಾಗಿ ಕಾಣುವ ಎಲ್ಲರನ್ನು ಜೊತೆಯಲ್ಲಿ ಬೆಳೆಸುವ ಸಾಮರ್ಥ್ಯ ಹೊಂದಿದವರು.

ಕೇವಲ ಒಕ್ಕಲಿಗ ನಾಯಕರಾಗದೇ ಸ್ವತಃ ಅಹಿಂದ ವರ್ಗಕ್ಕೆ ಸೇರಿದ ನಿಜವಾದ ಅಹಿಂದ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದರು. 2023 ರಲ್ಲಿ ಡಿ.ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗಾಗಿ ತಮ್ಮ ತನು-ಮನ-ಧನ ಸಹಾಯ ಮಾಡುತ್ತಾ 135 ಸ್ಥಾನಗಳನ್ನು ಪಡೆದು ಬಹುಮತದ ಪಕ್ಷವಾಗಿ ಹೊರಹೊಮ್ಮಿದ್ದು ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯರವರ ಹಿರಿತನಕ್ಕೆ ಗೌರವ ಕೊಟ್ಟು ಹೈಕಮಾಂಡ್ ಮೊದಲ ಎರಡುವರೆ ವರ್ಷ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಡಿ.ಕೆ ಶಿವಕುಮಾರ್‌ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು.

ಈ ಸಂದರ್ಭದಲ್ಲಿಯೇ ಹೈಕಮಾಂಡ್ ಎರಡುವರೆ ವರ್ಷದ ನಂತರ ಡಿ.ಕೆ ಶಿವಕುಮಾರ್‌ರವರನ್ನು ಸಿಎಂ ಮಾಡುವ ಭರವಸೆಯನ್ನು ನೀಡಿತ್ತು ಎಂದು ವಿವರಿಸಿದರು.

Author